ಚಿಕ್ಕಮಗಳೂರು: ಬಿಜೆಪಿಯವರ ಬಣ್ಣ ಬಯಲಿಗೆಳೆಯಲು ಆಗಸ್ಟ್ ೯ ರಂದು ಮೈಸೂರಿನಲ್ಲಿ ನಡೆಯುವ ಜನಾಂದೋಲನಾ ಸಮಾವೇಶಕ್ಕೆ ಜಿಲ್ಲೆಯಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಅವರು ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೈಸೂರಿನಲ್ಲಿ ನಡೆಯುವ ಜನಾಂದೋಲನಾ ಸಮಾವೇಶಕ್ಕೆ ಭಾಗವಹಿಸಲು ಎಲ್ಲಾ ತಯಾರಿ ನಡೆಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕ್ಷೇತ್ರದ ಶಾಸಕರುಗಳು ಈ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದು ಹೇಳಿದರು.
ಕಳೆದ ನಾಲ್ಕು ದಶಕಗಳಿಂದ ಸಚ್ಚಾರಿತ್ರ ರಾಜಕಾರಣ ಮಾಡುತ್ತಾ ಬಂದಿರುವ ಒಳ್ಳೆಯ ಆಡಳಿತಗಾರ, ಭಾಗ್ಯಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಗತಿಯನ್ನು ಮತ್ತು ಕಾಂಗ್ರೆಸ್ ಪಕ್ಷದ ಗೆಲುವನ್ನು ಸಹಿಸದ ಬಿಜೆಪಿಯವರು ಅವರ ಮೇಲೆ ಆರೋಪ ಹೊರಿಸಿ ಕೇಂದ್ರ ಸರ್ಕಾರವನ್ನು ಬಳಸಿಕೊಂಡು ನೋಟೀಸು ನೀಡಿದ್ದು, ಇದು ಒಪ್ಪುವಂತದ್ದು ಅಲ್ಲ ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯವರ ಬಣ್ಣ ಬಯಲು ಮಾಡುವ ಜನಾಂದೋಲನ ಚಳುವಳಿಯನ್ನು ಆರಂಭ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಗಸ್ಟ್ ೯ ರಂದು ನಡೆಯುವ ಮೈಸೂರಿನ ಜನಾಂದೋಲನ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ಇಂದಿನ ಯುವಕರು ನಾಯಕತ್ವ ಮತ್ತು ದೇಶದ ಏಳಿಗೆಗೆ ಯುವ ಕಾಂಗ್ರೆಸ್ ಚುನಾವಣೆ ಬಹಳ ಮಹತ್ವದ್ದಾಗಿದೆ. ಯುವಕರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತಿಳುವಳಿಕೆ ನೀಡಿ ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಣೆ ಮಾಡಿಸುವಂತೆ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಯುವ ನಾಯಕತ್ವ ದೇಶಕ್ಕೆ ಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರೆಲ್ಲರೂ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಯುವ ಕಾಂಗ್ರೆಸ್ ಚುನಾವಣೆ ಬಹಳ ಮಹತ್ವದ್ದಾಗಿದ್ದು, ಯುವಕರೆಲ್ಲರೂ ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶಾಂತಿಯುತವಾಗಿ ಚುನಾವಣೆ ನಡೆಸುವ ಸಂಬಂಧ ಜಿಲ್ಲಾ ಕಾಂಗ್ರೆಸ್ ತಮ್ಮೆಲ್ಲರಿಗೂ ಶುಭ ಹಾರೈಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್ ಮಾತನಾಡಿ, ನಾನು ಕೂಡ ಮಧ್ಯಮ ವರ್ಗದವನಾಗಿದ್ದು, ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು, ಅದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮದ್ ಅಕ್ಬರ್, ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ತನೋಜ್ ಕುಮಾರ್ ನಾಯ್ಡು, ನಗರ ಆಶ್ರಯ ಸಮಿತಿ ಸದಸ್ಯೆ ಯಶೋಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Thousands of people from the district participated in the Janandolana convention in Mysore