ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲದ ಆರೋಪ ಹೊರಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ ಎಂದು ಆರೋಪಿಸಿ ಅಹಿಂದ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಹನುಮಂತಪ್ಪ ವೃತ್ತದಿಂದ ಭಿತ್ರಿ ಪತ್ರಗಳನ್ನು ಹಿಡಿದು ಆಜಾದ್ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಬಿಜೆಪಿ, ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆ ಅಲ್ಲ ಪಾಪದ ಯಾತ್ರೆ. ಎಚ್.ಡಿ.ಕುಮಾರಸ್ವಾಮಿ, ವಿಜಯೇಂದ್ರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಸಾಕಷ್ಟು ಆರೋಪಗಳಿವೆ ಎಂದು ಟೀಕಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಅವರನ್ನು ಅಧಿಕಾರದಿಂದ ಇಳಿಸಲು ಹೊರಟರೆ ರಾಜ್ಯದ ಜನ ಸುಮ್ಮನೆ ಕೂರುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಈ ಹಿಂದೆ ಖನಿಜ ಸಂಪತ್ತು ಉಳಿಸಲು ಪಾದಯಾತ್ರೆ ಮಾಡಿದರು. ಕುಡಿವ ನೀರಿಗಾಗಿ ಮೇಕೆದಾಟು, ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಪಾದಯಾತ್ರೆ ಮಾಡಿದೆ ಆದರೆ, ಬಿಜೆಪಿಯವರು ಅಧಿಕಾರದ ದುರಾಸೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜ್ಯಪಾಲರು ಕಾನೂನುಬಾಹಿರವಾಗಿ ಸಿಎಂಗೆ ನೀಡಿರುವ ನೋಟೀಸ್ನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ಶಾ, ಪ್ರಧಾನಿ ಮೋದಿ ಅಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಮುಡಾ ನಿವೇಶನ ಪ್ರಕರಣ ಹಗರಣವೇ ಅಲ್ಲ. ಕಾನೂನಾತ್ಮಕವಾಗಿಯೇ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಅರಿಶಿನ ಕುಂಕುಮಕ್ಕೆ ನೀಡಿದ ಕೊಡುಗೆಯನ್ನೇ ಪ್ರಶ್ನಿಸುವ ವಿಜಯೇಂದ್ರ ತನ್ನ ಅಕ್ಕತಂಗಿಯರಿಗೆ ನೀಡಿಲ್ಲವೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ನಯಾಜ್ಅಹ್ಮದ್, ದಲಿತ ಮುಖಂಡರಾದ ಅಣ್ಣಯ್ಯ, ವಸಂತಕುಮಾರ್, ನೇಕಾರ ಒಕ್ಕೂಟದ ಅಧ್ಯಕ್ಷ ನಾರಾಯಣ, ಅಹಿಂದ ಒಕ್ಕೂಟದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮತ್ತಿತರರು ಮಾತನಾಡಿದರು.
ಲಕ್ಷ್ಮಣ ಹುಣಸೇಮಕ್ಕಿ, ಭರತ್, ಶಾಂತೇಗೌಡ ಮತ್ತಿತರರಿದ್ದರು.
Protest held in the city by previous organizations