ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಆ.೯ ರಂದು ದಾವಣಗೆರೆಯಲ್ಲಿ ೩೦ನೇ ವಿಶ್ವ ಆದಿವಾಸಿ ದಿನಾಚರಣೆ ನಡೆಯಲಿದೆ ಎಂದು ಪರಿಷತ್ನ ರಾಜ್ಯ ಕಾರ್ಯದರ್ಶಿ ಪಿ.ರಾಜೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಾಗಿನೆಲೆ ಸಂಸ್ಥಾನ ಕನಕಗುರು ಪೀಠ ತಿಂತಿಣಿ, ಚಿತ್ರದುರ್ಗದ ಶ್ರೀ ಮೇದಾರ ಕೇತೇಶ್ವರ ಗುರು ಪೀಠದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವು ದಾವಣಗೆರೆ ನಗರದ ಬಂಬೂ ಬಜಾರ್ನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ವೀರಗೋಟಾದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ, ಕೇತೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಸ್ವಯಂ ಪ್ರೇರಿತ ಪ್ರತ್ಯೇಕತೆ ಮತ್ತು ಆರಂಭಿಕ ಸಂಪರ್ಕದಲ್ಲಿಯ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವುದು ಘೋಷವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಆದಿವಾಸಿ ಪರಿಷತ್ನ ಅಧ್ಯಕ್ಷ ಕೃಷ್ಣಯ್ಯ ವಹಿಸಲಿದ್ದಾರೆ. ಬುಡಕಟ್ಟು ಜನಜೀವನದ ಬಗ್ಗೆ ಸಂಶೋಧನೆ ನಡೆಸಿ ಪಿಹೆಚ್ಡಿ ಪಡೆದಿರುವ ಮೂಲ ಆದಿವಾಸಿ ಸಮುದಾಯದ ೨೪ ಮಂದಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು.
ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೆಗ್ಗಡದೇವನ ಕೋಟೆ ಮೋಥಾ ಹಾಡಿಯ ಸೋಮಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಅದಿವಾಸಿ ಪರಿಷತ್ನ ಗೌರವಾಧ್ಯಕ್ಷರು, ಹಂಪಿ ವಿವಿ ಬುಡಕಟ್ಟು ಸಂಶೋಧನಾ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೆ.ಎಂ.ಮೇತ್ರಿ ಅವರಿಗೆ ಅಭಿನಂದಿಸಲಾಗುವುದು. ಸಮಾರಂಭದಲ್ಲಿ ಶಾಸಕರು, ಸಂಸದರು, ವಿವಿಧ ಇಲಾಖೆ ಅಧಿಕಾರಿಗಳು, ಮೇದಾ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ದಾವಣಗೆರೆಯ ಗಾಂಧಿ ವೃತ್ತದಿಂದ ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ವರೆಗೆ ಆದಿವಾಸಿ ತಂಡಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಮೂಲ ಆದಿವಾಸಿಗಳು, ಮುಖಂಡರೊಂದಿಗೆ ಕಲಾ ಮೇಳ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆದಿವಾಸಿ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಗೌಡ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡೆನೆರಳು ಶಂಕರ್, ಪದಾಧಿಕಾರಿಗಳಾದ ರಮೇಶ್, ಮಹೇಶ್, ಶಿವಾಜಿ, ವಿಜಯೇಂದ್ರ, ಗಿರಿ ಇತರರು ಇದ್ದರು.
World Adivasi Day in Davangere