ಚಿಕ್ಕಮಗಳೂರು: ಮನುಷ್ಯನ ಗಮನ ಗುರಿಯತ್ತ ಇರಲಿ ಅಡೆತಡೆಯ ಮೇಲಲ್ಲ- ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) – ಕಷ್ಟವು ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟವು ನಾವು ಯಾರನ್ನು ನಂಬಬೇಕು ಎಂದು ಕಲಿಸುತ್ತದೆ. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭ ಹಾಗೂ ಲಿಂ.ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಹಣೆಬರಹದ ಮೇಲೆ ನಿಂತಿಲ್ಲ. ಒಂದಿಷ್ಟು ಆತ್ಮಸ್ಥೈರ್ಯ ಮತ್ತು ಕಠಿಣ ಪರಿಶ್ರಮದಿಂದ ಬದುಕನ್ನು ಬದಲಿಸಿಕೊಳ್ಳುವ ಆಯ್ಕೆ ಅವರವರ ಕೈಯಲ್ಲಿಯೇ ಇದೆ. ಮನುಷ್ಯ ಫಲಭರಿತ ಬಾಳೆಯಂತೆ ಬಾಗಬೇಕು. ಬೀಗಬಾರದು. ಒಳ್ಳೆಯತನಕ್ಕೆ ಬೆಲೆಯಿಲ್ಲ ಅನ್ನುವುದು ಎಷ್ಟು ಸತ್ಯವೋ ಆ ಒಳ್ಳೆತನ ನಮ್ಮನ್ನು ಕೈ ಬಿಡುವುದಿಲ್ಲ ಅನ್ನುವುದು ಅಷ್ಟೇ ಸತ್ಯ. ಪೆಟ್ಟು ತಿಂದ ಕಲ್ಲು ಮೂರ್ತಿಯಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಡುವವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜ್ಞಾನಿಗಳಾಗುತ್ತಾರೆ.
ಲಿಂ.ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರಮ ಮತ್ತು ಸಾಧನೆಯ ಮೂಲಕ ವೀರಶೈವ ಧರ್ಮ ಸಂಸ್ಕೃತಿ ಹಾಗೂ ಗುರು ಪೀಠಗಳ ಪಾವಿತ್ರ್ಯತೆಯನ್ನು ಹೆಚ್ಚಿಸಿದರು. ರಚನಾತ್ಮಕ ಮತ್ತು ಗುಣಾತ್ಮಕ ಸತ್ಕಾರ್ಯಗಳನ್ನು ಮಾಡಿ ‘ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ’ ಎಂದು ಪ್ರಖ್ಯಾತಿಗೊಂಡಿದ್ದನ್ನು ಮರೆಯಲಾಗದೆಂದ ಅವರು ಲಿಂ.ಶಿವಾನಂದ ಜಗದ್ಗುರುಗಳವರ ಹೆಸರಿನಲ್ಲಿ ಬಡ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯ ಹಾಗೂ ಯಾತ್ರಿ ನಿವಾಸ ನಿರ್ಮಿಸುವುದರ ಮೂಲಕ ಶ್ರೀ ಪೀಠ ಕೃತಜ್ಞತೆಯನ್ನು ಸಲ್ಲಿಸಿದೆ ಎಂದರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಅದೃಷ್ಟ ನಮ್ಮ ಕೈಯಲ್ಲಿಲ್ಲದೇ ಇರಬಹುದು. ಆದರ ನಿರ್ಧಾರ ಇದೆ. ಸರಿಯಾದ ನಿರ್ಧಾರ ಕೈಗೊಳ್ಳುವುದರ ಮೂಲಕ ಧರ್ಮಕ್ಕೆ ಮತ್ತು ಗುರು ಪರಂಪರೆಗೆ ಕೀರ್ತಿ ತಂದ ಯಶಸ್ಸು ಲಿಂ.ಶ್ರೀ ಶಿವಾನಂದ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳು, ಲಿಂ.ಪರಮತಪಸ್ವಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಹಾಗೂ ನಾಗನೂರು ಕಾಶೀನಾಥ ಶಾಸ್ತ್ರಿಗಳು ಅಪಾರವಾಗಿ ಶ್ರಮಿಸಿದ್ದನ್ನು ಎಂದೆಂದಿಗೂ ಮರೆಯಲಾಗದೆಂದರು.
ಇದೆ ಸಂದರ್ಭದಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜರುಗಲಿರುವ ಶರನ್ನವರಾತ್ರಿ ದಸರಾ ದರ್ಬಾರ ಕಾರ್ಯಕ್ರಮದ ಪ್ರಥಮ ಪ್ರಕಟಣೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಬೆಳಗೊಳದ ಬಿ.ಎ.ಶಿವಶಂಕರ್, ಬೊಗಸೆ ಬಿ.ಎಂ.ಬೋಜೇಗೌಡರು, ಪರದೇಶಪ್ಪನವರ ಮಠದ ಮಧುಕುಮಾರ್, ಬೊಗಸೆ ರುದ್ರೇಗೌಡರು, ಸಂಕಪ್ಪನವರ, ಸುಜಾತಾ ಅಳವಂಡಿ, ಮಹಾದೇವಿ ಪಾಟೀಲ, ವೀರೇಶ ಕುಲಕರ್ಣಿ, ಮಠದ ರೇಣುಕ, ಶಿವಪ್ರಕಾಶ ಶಾಸ್ತ್ರಿ, ಸಿದ್ಧಲಿಂಗಯ್ಯ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.
ಸ್ಮರಣೋತ್ಸವ ಸಮಾರಂಭದ ನಿಮಿತ್ಯ ಪರಮ ಪೂಜ್ಯ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಕರ್ತೃ ಗದ್ದಿಗೆಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಪೂಜೆ ಜರುಗಿತು. ಶ್ರೀ ಶಿವಾನಂದ ವಿದ್ಯಾರ್ಥಿ ನಿಲಯದಲ್ಲಿ ಶಿವಾನಂದ ಜಗದ್ಗುರುಗಳವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು.
ಬೆಳಗಿನ ಜಾವ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಅಭಿಷೇಕ, ಶಕ್ತಿತ್ರಯ ಮೂರ್ತಿಗಳಾದ ಚೌಡೇಶ್ವರಿ, ಭದ್ರಕಾಳಿ ಮತ್ತು ಪಾರ್ವತಿ ಮಂಗಲ ಮೂರ್ತಿಗೆ ಕುಂಕುಮಾರ್ಚನೆ ಜರುಗಿತು. ಖಾಂಡ್ಯ ಮತ್ತು ಜಾಗರ ಹೋಬಳಿ ಮುಖ್ಯಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಆಗಮಿಸಿದ ಎಲ್ಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.
Commemoration of Shri Jagadguru Shivananda Rajendra Shivacharya Bhagwatpada