ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸ. ಶ್ರಾವಣದಿಂದ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನಾಗರ ಪಂಚಮಿ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ವರ್ಷ ಪೂರ್ತಿ ಸಂತೋಷ ತರುವ ನಾಗರ ಪಂಚಮಿ ಹೆಣ್ಣು ಮಕ್ಕಳಿಗೆ ಬಹು ದೊಡ್ಡ ಹಬ್ಬ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ರಂಭಾಪುರಿ ಪೀಠದಲ್ಲಿ ನಾಗರಕಟ್ಟೆಯಲ್ಲಿರುವ ನಾಗದೇವತೆಗೆ ಹಾಲೆರೆದು ಆಶೀರ್ವಚನ ನೀಡುತ್ತಿದ್ದರು. ನಾಗರ ಪಂಚಮಿಯಂದು ಮಣ್ಣಿನ ನಾಗಪ್ಪನನ್ನು ಮಾಡಿ ಮನೆ ಮಂದಿಯೆಲ್ಲ ಹಾಲೆರೆಯುವ ಹಬ್ಬ. ಹಾಲು ಎರೆಯುವಾಗ ಮನೆಯ ಎಲ್ಲ ಸದಸ್ಯರ ಹೆಸರು ಹೇಳಿ ಹಾಲೆರೆಯುತ್ತಾರೆ. ನಾಗರ ಪಂಚಮಿಯಂದು ನಾನಾ ತರದ ಉಂಡೆಗಳನ್ನು ಮಾಡಿ ನಾಗದೇವತೆಗೆ ನೈವೇದ್ಯ ಮಾಡಿ ಸೇವಿಸುತ್ತಾರೆ.
ಪಂಚಮಿ ಹಬ್ಬ ಬಂತು ಸನಿಯಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ ಎಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ತವರು ಮನೆಯನ್ನು ನೆನಪಿಸುವ ಹಬ್ಬವಾಗಿದೆ. ಸಹೋದರ ಸಹೋದರಿಯರ ಬಾಂಧವ್ಯದ ಬೆಸುಗೆಗೆ ನಾಗರ ಪಂಚಮಿ ಸಾಕ್ಷಿಯಾಗಿದೆ. ರೈತರಿಗೆ ಕಾಟ ಕೊಡದೇ ಕೀಟಗಳನ್ನು ತಿಂದು ಉತ್ತಮ ಫಸಲು ಬರಲಿ ಎಂಬ ಕಾರಣಕ್ಕೆ ನಾಗರ ಹುತ್ತಕ್ಕೆ ಹಾಲೆರೆಯುತ್ತಾ ಬಂದಿರುವ ಸಂಪ್ರದಾಯವಿದೆ.
ಉತ್ತರ ಕರ್ನಾಟಕದಲ್ಲಿ ದೊಡ್ಡ ಮರಕ್ಕೆ ಜೋಕಾಲಿ ಕಟ್ಟಿ ಮನೆ ಮಂದಿ ಸ್ನೇಹಿತೆಯರೆಲ್ಲರೂ ಅಲ್ಲದೇ ವಿಶೇಷವಾಗಿ ಹೆಣ್ಣು ಮಕ್ಕಳು ಜೋಕಾಲಿ ಜೀಕುವ ಸಂತೋಷ ತರುವ ಹಬ್ಬವಾಗಿದೆ. ನಾಗ ಮಹಿಮೆಯನ್ನು ಸಾರುವ ಅನೇಕ ಚಲನ ಚಿತ್ರಗಳು ಪ್ರಸಾರಗೊಂಡಿರುವುದು ಈ ಹಬ್ಬದ ವೈಶಿಷ್ಠ್ಯತೆ ಮಹತ್ವವನ್ನು ಅರಿಯಬಹುದಾಗಿದೆ ಎಂದರು.
ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನಾಗಪ್ಪನಿಗೆ ಮೊದಲು ಹಾಲೆರೆದ ನಂತರ ಸುತ್ತ ಮುತ್ತಲಿನಿಂದ ಬಂದ ಹೆಣ್ಣು ಮಕ್ಕಳು ಸರದಿಯಲ್ಲಿ ಹಾಲೆರೆದು ನಾಗಪ್ಪನಿಗೆ ಪೂಜಿಸುವ ದೃಶ್ಯ ಅಪೂರ್ವವಾಗಿತ್ತು.
ಈ ಸಂದರ್ಭದಲ್ಲಿ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಶಿವಶರಣಪ್ಪ ಸೀರಿ, ಪ್ರಕಾಶ ಶಾಸ್ತ್ರಿ, ರುದ್ರೇಶ ಜಗದೀಶ ಸಹೋದರರು ಮತ್ತು ಶ್ರೀ ಪೀಠದ ಗುರುಕುಲ ಸಾಧಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
Sri Rambhapuri Dr. Weerasomeshwara Jagadguru of Peetha at Rambhapuri worshiped Nagadevata.