September 10, 2024

ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹತಾಶರಾಗಿ ಜನಾಂದೋಲನ

0
ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಸುದ್ದಿಗೋಷ್ಠಿ

ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನಾರ್ಥವಾಗಿ ಪಾದಯಾತ್ರೆ ನಡೆಸುತ್ತಿರುವುದು ಸಂವಿಧಾನ ಬದ್ದ ಹಕ್ಕಾಗಿದ್ದು, ಇದರಿಂದ ಹತಾಶರಾಗಿರುವ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ನಾಯಕರು ಪ್ರತಿಯಾಗಿ ಜನಾಂದೋಲನ ನಡೆಸುತ್ತಿರುವುದು ನೈತಿಕ ಅಧಃಪತನದ ಸಂಕೇತವಾಗಿದೆ ಎಂದು ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಪಿತಾಮಹರಾದ ಕಾಂಗ್ರೆಸ್‌ನವರು ಅವರ ಮುಖ್ಯಮಂತ್ರಿ ಮಾಡಿದ ಬೃಹತ್ ಭ್ರಷ್ಟಾಚಾರದ ಪರವಾಗಿ ಹೋರಾಟ ಮಾಡಿ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಅವರ ದಯನೀಯ ಸ್ಥಿತಿಯನ್ನು ತೋರಿಸುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ವರ್ಷದ ಅವಧಿಯಲ್ಲೇ ದಾಖಲೆಗಳೊಂದಿಗೆ ಹಗರಣಗಳು ನಡೆದಿರುವುದು ಕಣ್ಣೆದುರಿಗೆ ಕಾಣುತ್ತಿದೆ. ಅದನ್ನು ಮುಚ್ಚಿಹಾಕುವ ಪ್ರಯತ್ನವಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿರೋಧ ಮತ್ತು ಕುತಂತ್ರ ರಾಜ್ಯದ ಜನರಿಗೆ ಈಗಾಗಲೇ ತಿಳಿದಿದ್ದು, ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದರು.

ಮೈಸೂರಿನ ದೇವನೂರಿನಲ್ಲಿ ೧೯೯೭ ಇಸವಿಯಲ್ಲಿ ೩ಎಕರೆ ೧೬ ಗುಂಟೆ ಜಾಗವನ್ನು ಅಹಿಂದಾ ನಾಯಕನೆಂದು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಕುಟುಂಬಕ್ಕೆ ವಂಚನೆ ಮಾಡಿದ್ದಾರೆ. ಈ ಕುಟುಂಬದ ಇತರೆ ಯಾವುದೇ ಸದಸ್ಯರ ಒಪ್ಪಿಗೆ ಇಲ್ಲದೇ ಮುಖ್ಯಮಂತ್ರಿಯ ಕುಟುಂಬದವರು ಅಕ್ರಮವಾಗಿ ಪಡೆದುಕೊಂಡಿರುವುದಕ್ಕೆ ಈಗಾಗಲೇ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಸಿಬಿಐನಂತಹ ತನಿಖಾ ಸಂಸ್ಥೆಯಿಂದ ತನಿಖೆಯಾದಲ್ಲಿ ಸತ್ಯ ಸಂಗತಿ ಹೊರಬರಬಹುದೆಂದು ಹೆದರಿ, ಹಗರಣವನ್ನುಮುಚ್ಚಿಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಸುತ್ತಿರುವುದು ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ ಎಂದರು.

ಬಿಜೆಪಿ ನಮ್ಮ ನಾಯಕರಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಈಗಾಗಲೇ ಈ ಹಗರಣದ ಬಗ್ಗೆ ಬಹಿರಂಗ ಪತ್ರಬರೆದಿದ್ದಾರೆ. ಅದೇ ರೀತಿಯಲ್ಲಿ ವಾಲ್ಮಿಕಿಯ ಹಗರಣದಲ್ಲಿ ಮುಖ್ಯಮಂತ್ರಿ ಕೈವಾಡ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ಸಿನ ಕಾರ್ಯಕರ್ತರೇ ವಾಲ್ಮೀಕಿ ನಿಗಮಕ್ಕೆ ರಾಜ್ಯ ಹುಜೂರ್ ಖಜಾನೆ-೨ ರಿಂದಲೇ ಹಣ ನೇರ ವರ್ಗಾವಾಣೆಯಾಗಿದೆ. ಸಿದ್ಧರಾಮಯ್ಯನವರೇ ಹಣಕಾಸು ಸಚಿವ ಹಾಗಾದರೇ ಈ ವಿಷಯ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಹಣ ೧೮೭ ಕೋಟಿ ೩೩ ಲಕ್ಷ ವಿವಿಧ ಖಾತೆಗಳಿಗೆ ವರ್ಗಾವಾಣೆಯಾಗಿರುವುದು ಸುಳ್ಳೇ? ಇದು ಕಾಂಗ್ರೆಸ್ ಮುಖ್ಯಮಂತ್ರಿಯ ಹಗಲು ದರೋಡೆ ಅಲ್ಲವೇ? ಸರ್ಕಾರಿ ಅಧಿಕಾರಿ ಚಂದ್ರಶೇಖರ್ ಸಾವನ್ನಪ್ಪದೇ ಇದ್ದಿದ್ದರೇ ಈ ವಿಷಯ ಜನಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ೬೦೦ ಕೋಟಿ ರೂಗಳ ಹಗರಣ ನಡೆದಿದೆ, ಎಸ್.ಸಿ.ಟಿ.ಎಸ್.ಪಿ ಯೋಜನೆಯ ೨೫ ಸಾವಿರ ಕೋಟಿ ರೂಗಳ ದುರ್ಬಳಕೆ, ಬಿಬಿಎಂಪಿಯಲ್ಲಿ ೨ ಸಾವಿರ ಕೋಟಿ ರೂಗಳ ನಿಯಮ ಬಾಹಿರ ಟೆಂಡರ್ ಪ್ಯಾಕೇಜ್ ಮಾಡಿ ಪರ್ಸೆಂಟೇಜ್ ನಿಗದಿ, ಎಸ್‌ಎಸ್‌ಡಿಪಿ ಟೆಂಡರ್ ಪ್ಯಾಕೇಜ್ ಮಾಡಿ ೪ ಸಾವಿರ ಕೋಟಿ ಬೇಕಾದವರಿಗೆ ಟೆಂಡರ್ ನೀಡಿರುವುದು ಸೇರಿದಂತೆ ಹಲವು ಹಗರಣಗಳು ನಡೆದಿದ್ದು, ಅವುಗಳ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಒತ್ತಾಯಿಸುತ್ತದೆ ಎಂದರು

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮೊನ್ನೆ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆ ಅಸಹ್ಯವಾಗಿ ಮಾತನಾಡಿರುತ್ತಾರೆ. ಅವರದ್ದೇ ಪಕ್ಷದ ಶಾಸಕ ಹೆಚ್.ಡಿ.ತಮ್ಮಯ್ಯ ಯಡಿಯೂರಪ್ಪನವರನ್ನು ಹಾಡಿ-ಹೊಗಳಿರುವುದು ಸುಳ್ಳೇ ಎಂದು ಪ್ರಶ್ನಿಸಿರುವ ಅವರು, ೮೩ ವರ್ಷದ ಹಿರಿಯರಾದ ಯಡಿಯೂರಪ್ಪನವರ ಮೇಲೆ ಅಸಹ್ಯವಾಗಿ ಮಾತನಾಡಿರುವುದು ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತ ಸಮಾಜ ಕಾಂಗ್ರೆಸ್‌ಗೆ ಸರಿಯಾದ ಬುದ್ದಿಯನ್ನು ಕಲಿಸುತ್ತದೆ. ಈ ರೀತಿ ನಾಲಿಗೆ ಹರಿಬಿಟ್ಟಿರುವ ಎಂ.ಎಲ್.ಮೂರ್ತಿಯವರ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.

ಸಿ.ಟಿ.ರವಿಯವ ಬಗ್ಗೆ ಕಾಂಗ್ರೆಸ್ ಮುಖಂಡ ದೇವರಾಜು ನಾಲಿಗೆ ಹರಿಬಿಟ್ಟಿರುವುದನ್ನು ಬಿಜೆಪಿ ಖಂಡಿಸುತ್ತದೆ. ಆಂಜನೇಯ ಟ್ರಸ್ಟ್‌ಗೆ ನಿವೇಶನ ನೀಡಿಕೆ ವಿಚಾರದ ಬಗ್ಗೆ ಈಗಾಗಲೇ ಲೋಕಾಯುಕ್ತರಲ್ಲಿ ೨ ಬಾರಿ ತನಿಖೆ ನಡೆದು ಬಿ-ರಿಪೋರ್ಟ್ ಸಲ್ಲಿಕೆಯಾಗಿದೆ ಎಂಬುದನ್ನು ದೇವರಾಜು ಮೊದಲು ತಿಳಿದುಕೊಳ್ಳಲಿ. ಸಿ.ಟಿ.ರವಿಯವರು ಸಿದ್ಧಾತದ ರಾಜಕಾರಣ ಮಾಡುತ್ತಿದ್ದಾರೆ ಅವರು ದೇವರಾಜ್ ರೀತಿ ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಬೀಕನಹಳ್ಳಿ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಕವೀಶ್, ನೆಟ್ಟೆಕೆರೆಹಳ್ಳಿ ಜಯಣ್ಣ ಇದ್ದರು.

The Congress Party Padayatra is a desperate mass movement

About Author

Leave a Reply

Your email address will not be published. Required fields are marked *