ಅತಿವೃಷ್ಟಿ ಹಾನಿ-ವೈಜ್ಞಾನಿಕ ಪರಿಹಾರ ನೀಡಲು ರೈತಸಂಘ ಆಗ್ರಹ
ಚಿಕ್ಕಮಗಳೂರು; ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮುಂಗಾರಿನ ಬೆಳೆ ಕಳೆದುಕೊಂಡ ರೈತರ ಬೆಳೆ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ಸೂಕ್ತ ಪರಿಹಾರ ನೀಡಬೇಕು ಮತ್ತು ಹಿಂಗಾರು ಬೆಳೆ ಮಾಡುಲು ರೈತರಿಗೆ ಬೀಜ, ರಸಗೊಬ್ಬರ, ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡಲು ಕ್ರಮವಹಿಸುವಂತೆ ಒತ್ತಾಯಿಸಿದರು.
ಪ್ರಸಕ್ತ ವರ್ಷದ ಮೇ ಯಿಂದ ಜುಲೈ ಅಂತ್ಯದವರೆಗೆ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿರುವ ಪರಿಣಾಮ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಎಲ್ಲಾ ಬೆಳೆಗಳು ಹಾನಿಯಾಗಿದ್ದು, ಫಸಲಿಗೆ ಬಂದ ಮೆಣಸಿನಕಾಯಿ, ಟೊಮ್ಯಾಟೋ, ಬೀನ್ಸ್, ಮೆಕ್ಕೆಜೋಳ ಸೇರಿದಂತೆ ಕಾಫಿ, ಅಡಿಕೆ, ತೆಂಗು, ಏಲಕ್ಕಿ, ಮೆಣಸು ಮುಂತಾದ ವಾಣಿಜ್ಯ ಬೆಳೆಗಳು ನೆಲ ಕಚ್ಚಿರುವುದರಿಂದ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.
ಬಾರಿ ಬಿರುಗಾಳಿಗೆ ಜಿಲ್ಲೆಯಾದ್ಯಂತ ನೂರಾರು ಮನೆಗಳು ಕುಸಿದಿವೆ, ಚಿಕ್ಕಮಗಳೂರು ತಾಲ್ಲೂಕು ಒಂದರಲ್ಲೇ ೬೫ ಮನೆಗಳು ಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಸುಮಾರು ೩ ಸಾವಿರ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ದಿನದೂಡುವಂತಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಳ್ಳಬೇಕೆಂದು ಆಗ್ರಹಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ಬರಗಾಲ ಪೀಡಿತವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದರು. ಸರ್ಕಾರ ಸಮರ್ಪಕ ಪರಿಹಾರ ವಿತರಣೆ ಮಾಡದೆ ರೈತರಿಗೆ ಅನ್ಯಾಯವೆಸಗಿದೆ ಎಂದ ಅವರು ಚಿಕ್ಕಮಗಳೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇರುವುದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಸರ್ಕಾರಿ ಆಡಳಿತ ಯಂತ್ರ ಈ ಬಗ್ಗೆ ಜಾಣ ಮೌನ ತಾಳಿದೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಸರ್ಕಾರಿ ಪ್ರಾಯೋಜಿತ ಮೋಸದ ಜಾಲವಾಗಿದ್ದು, ಈ ಯೋಜನೆಯಡಿ ನೊಂದಾಯಿಸಿದ ಶೇ. ೯೫ ರಷ್ಟು ರೈತರಿಗೆ ವಿಮಾ ಸೌಲಭ್ಯ ದೊರೆಯದಂತೆ ನಿಯಮಗಳನ್ನು ಜಾರಿಮಾಡಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
೭ ವರ್ಷಗಳ ಬೆಳೆಯ ಶೇಕಡವಾರು ಅಂದಾಜುಮಾಡಿ ಪರಿಹಾರ ಜಾರಿ ಮಾಡುವುದು ಹಾಗೂ ಕ್ರಾಪ್ ಕಟ್ಟಿಂಗ್ ಎಕ್ಸಪೆರಿಮೆಂಟ್ ಈ ಎರಡು ನಿಯಮಗಳು ಅವೈಜ್ಞಾನಿಕವಾಗಿದ್ದು, ರೈತರಿಗೆ ಮೋಸ ಮಾಡುವ ಸಲುವಾಗಿ ಸರ್ಕಾರ ರೂಪಿಸಿರುವ ಈ ನಿಯಮಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದ ಅವರು ಬೆಳೆ ವಿಮೆ ವ್ಯಾಪ್ತಿಯಿಂದ ರೈತರ ಉತ್ಪನ್ನಗಳನ್ನು ಹೊರಗಿಡುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ಸಿ ಬಸವರಾಜು, ತಾಲ್ಲೂಕು ಅಧ್ಯಕ್ಷ ಸುನಿಲ್ ಕುಮಾರ್, ಉಪಾಧ್ಯಕ್ಷ ಹೆಚ್.ಎಂ ಲೋಕೇಶ್, ತಾಲ್ಲೂಕು ಖಜಾಂಚಿ ಜೆ.ಎಸ್ ಶಿವಣ್ಣ ಉಪಸ್ಥಿತರಿದ್ದರು.
Farmers’ Associations demand scientific relief for flood damage