ದೆಹಲಿ ಉಪಮುಖ್ಯಮಂತ್ರಿ ಆರೋಪಗಳಿಲ್ಲದೆ ಜೈಲಿನಲ್ಲಿಟ್ಟ ಕ್ರಮ ಖಂಡನೀಯ
ಚಿಕ್ಕಮಗಳೂರು: ದೆಹಲಿ ಉಪಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಅವರಿಗೆ ನ್ಯಾಯಾಲಯ ೫೩೦ ದಿನಗಳ ನಂತರ ಜಾಮೀನು ಮಂಜೂರು ಮಾಡಿದೆ. ಅವರ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಪುರಾವೆಗಳನ್ನು ನೀಡದೆ ಜೈಲಿನಲ್ಲಿಟ್ಟ ಇಡಿ ಮತ್ತು ಸಿಬಿಐನ ಕ್ರಮವನ್ನು ಎಎಪಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಮಾದ್ಯಮ ಪ್ರತಿನಿಧಿ ಡಾ.ಸುಂದರಗೌಡ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ತ್ವರಿತ ನ್ಯಾಯದ ಹಕ್ಕನ್ನು ಮುರಿದು, ಮೂಲಭೂತ ಹಕ್ಕು, ಸ್ವಾತಂತ್ರ್ಯವನ್ನು ಕಿತ್ತುಕೊಂಡು ಸಿಸೋಡಿಯಾ ಅವರನ್ನು ಜೈಲಿನಲ್ಲಿಟ್ಟು ಉನ್ನತವಾದ ಮಾನವ ಶಕ್ತಿಯನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.
ದೆಹಲಿಯಲ್ಲಿ ನಿರಂತರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚುವಂತೆ ಮಾಡಿರುವ ಆಮ್‌ಆದ್ಮಿ ಪಕ್ಷದ ಶಿಕ್ಷಣ ನೀತಿ ಮತ್ತು ಆರೋಗ್ಯ ನೀತಿಯ ಮೂಲಕ ಪ್ರಪಂಚದ ಗಮನ ಸೆಳೆದಿರುವ ಎಎಪಿ ಸೂತ್ರದಾರಿ ನಾಯಕರುಗಳನ್ನು ಇಡಿ ಮತ್ತು ಸಿಬಿಐ ಮೂಲಕ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು.
೧೭ ತಿಂಗಳಿನಿಂದ ಕೋರ್ಟ್‌ನಲ್ಲಿ ಕೇಸಿನ ಬಗ್ಗೆ ಪುರಾವೆ ನೀಡದೆ ದೇಶಕ್ಕಾಗಿ ದುಡಿದ ನಾಯಕನನ್ನು ಜೈಲಿನ ಕತ್ತಲೆ ಕೋಣೆಯಲ್ಲಿ ಇಡಲಾಗಿತ್ತು. ಇದು ಮಹಾ ದ್ರೋಹವಾಗಿದೆ ಎಂದರು.
ಸಾರ್ವಜನಿಕರಲ್ಲಿ ಭ್ರಷ್ಟಮುಕ್ತ ಭಾರತದ ಇಚ್ಛಾಶಕ್ತಿ ಬೆಳೆಯಬೇಕಿದೆ. ಪ್ರಜಾಪ್ರಭುತ್ವ ಉಳಿಸುವ ಹೋರಾಟಕ್ಕೆ ಕೈಹಾಕದಿದ್ದಲ್ಲಿ ಬಾಂಗ್ಲಾದೇಶದಂತೆ ದೇಶದ ನಾಯಕರನ್ನೇ ಪಲಾಯನ ಮಾಡುವಂತಹ ದಂಗೆಯು ಭಾರತದಲ್ಲಿ ಸೃಷ್ಠಿಯಾಗಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಮುಖಂಡರುಗಳಾದ ಹೆಚ್.ಮೋಹನ್, ವಿಲಿಯಂ ಪೆರೇರ, ಪ್ರಕಾಶ್ ಇದ್ದರು.
Delhi Deputy Chief Minister jailed without charge is condemnable