ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಸರ್ವೆ ನಂಬರ್ ೩೬೯ರಲ್ಲಿನ ಮತ್ತಾವರ ಬ್ಲಾಕ್ ೨ರಲ್ಲಿನ ೨೦ ಎಕರೆ ೧೧ ಗುಂಟೆ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.
ಡಿ.ಆರ್. ರಮೇಶ್ ಎಂಬುವರು ೨೦ ಎಕರೆ ೧೧ ಗುಂಟೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿ ಕಾಫಿ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದರು. ಈ ಒತ್ತುವರಿ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನು ಏರಿ ನ್ಯಾಯಾಲಯದಲ್ಲಿ ತೀರ್ಪು ಅರಣ್ಯ ಇಲಾಖೆ ಪರವಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಬಂದೋಬಸ್ತಸ್ನಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿದ್ದಾರೆ.
ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ಬಾಬು ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಮೋಹನ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿದ್ದಾರೆ.
ಚಿಕ್ಕಮಗಳೂರು ವಿಭಾಗದಲ್ಲಿ ೨,೫೦೦ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಒಟ್ಟು ೧,೨೪೫ ಪ್ರಕರಣಗಳಲ್ಲಿ ೩ ಎಕರೆಯೊಳಗೆ ೮೪೫ ಹಾಗೂ ೩ ಎಕರೆ ಮೇಲ್ಪಟ್ಟು ೪೦೦ ಪ್ರಕರಣಗಳು ಇವೆ. ಸದ್ಯ ೩ ಎಕರೆ ಮೇಲ್ಪಟ್ಟ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ.
ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಸೂಚನೆ ನೀಡಿದ್ದರು. ಜೊತೆಗೆ ನ್ಯಾಯಾಲಯದಲ್ಲಿಯೂ ಅರಣ್ಯ ಇಲಾಖೆ ಪರವಾಗಿಯೇ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಹೀಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡಿರುವವರಿ ಭಯ ಆರಂಭಗೊಂಡಿದೆ.
ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಗಳು ಹೇಗೆ ಆಗಾಗ ಮರುಕಳಿಸುತ್ತಲೇ ಇವೆ. ಜೊತೆಗೆ ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆ ಮತ್ತು ಒತ್ತುವರಿದಾರರ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ರಾಜಕೀಯ ಮಧ್ಯಸ್ಥಿಕೆಯಿಂದಾಗಿ ತೆರವು ಕಾರ್ಯಾಚರಣೆ ಮೂಲೆ ಹಿಡಿದಿತ್ತು.
ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸಬೇಕು ಇಲ್ಲದೆ ಹೋದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರಿಂ ಕೋರ್ಟ್ನ ಹಸಿರು ಪೀಠ ಹಲವು ಪ್ರಕರಣಗಳಲ್ಲಿ ಪುನಾರುಚ್ಚರಿಸುತ್ತಲೇ ಬಂದಿದೆ. ಆದರೆ, ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿಯನ್ನು ಎದುರಿಸಲಾಗದೆ ಅಸಹಾಯಕರಾಗಿದ್ದರು.
ಕೇರಳದ ವಾಯನಾಡ್ನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಮಂದಿ ಮೃತಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚರಗೊಂಡಿದ್ದು, ಅರಣ್ಯ ಒತ್ತುವರಿ ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.
Forest encroachment clearing operation started in the district