ಚಿಕ್ಕಮಗಳೂರು: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಸಂಭ್ರಮವನ್ನು ವೈವಿದ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದ್ದಾರೆ.
ಈ ಸಂಭ್ರಮದ ಒಂದು ಭಾಗವಾಗಿ ‘ಹರ್ ಘರ್ ತಿರಂಗಾ, ಎಂಬ ಘೋಷ ವಾಕ್ಯದೊಂದಿಗೆ ೨೦೨೪ ರ ಆಗಸ್ಟ್ ೧೩ ರಿಂದ ೧೫ರ ವರೆಗೆ ದೇಶದ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶ ಭಕ್ತಿ ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಿಗೊಳಿಸಿ ದಾಖಲಿಸುವಂತೆ ಕರೆ ನೀಡಿ ‘ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ, ಚಿತ್ರಕಲಾ ಶಿಬಿರ, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ಸಹಕಾರದಿಂದ ಆಗಸ್ಟ್ ೧೩ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಗರದ ಕೋಟೆ ಬಡಾವಣೆಯಲ್ಲಿರುವ ಐತಿಹಾಸಿಕ ಸುಗ್ಗಿ ಕಲ್ಲಿನಿಂದ ಜಿಲ್ಲಾಧಿಕಾರಿಗಳ ಕಛೇರಿಯ ನೆನಪಿಂಗಳದವರೆಗೆ ವಾಕಥಾನ್ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಎಲ್ಲಾ ಕಛೇರಿಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವರು.
ಆಗಸ್ಟ್ ೧೪ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಗರದ ಕೆ ಎಂ. ರಸ್ತೆಯ ದಂಟರಮಕ್ಕಿಯಿಂದ ಐಡಿಎಸ್ಜಿ ಕಾಲೇಜಿನವರೆಗೆ ಐಡಿಎಸ್ಜಿ ಕಾಲೇಜಿನ ವಿದ್ಯಾರ್ಥಿಗಳಿಂದ, ಎಐಟಿ ಸರ್ಕಲ್ನಿಂದ ಎಐಟಿ ಕಾಲೇಜಿನ ವರೆಗೆ ಎಐಟಿ ಕಾಲೇಜಿನ ವಿದ್ಯಾರ್ಥಿಗಳಿಂದ ತಿರಂಗಾ ಯಾತ್ರೆ ಏರ್ಪಡಿಸಲಾಗುವುದು.
ರಿವರ್, ರ್ಯಾಪ್ಪಿಂಗ್ನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆ ಮೂಲಕ ನಡೆಸಲಾಗುವುದು.
ಸಾರ್ವಜನಿಕರು ಈ ತಿರಂಗಾ ಅಭಿಯಾನದಲ್ಲಿ ಕೈ ಜೋಡಿಸಿ ತಮ್ಮ ತಮ್ಮ ಮನೆಗಳ ಮೇಲೆ ತಿರಂಗಾ ಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
District-wide Har Ghar Tiranga Abhiyan