ಚಿಕ್ಕಮಗಳೂರು: ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕೊಡುವ ಜೊತೆಗೆ ನಾಶಗೊಂಡಿರುವ ಹಿಂದೂ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ನೂತನ ಸರ್ಕಾರ ಕ್ರಮ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಭೀಕರ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಗಡಿಯಾಚೆಯಿಂದ ಜಿಹಾದಿಗಳು ಒಳ ನುಸುಳುವಿಕೆ ಪ್ರಯತ್ನ ನಡೆಸುತ್ತಿದ್ದು, ಈ ಸಂಬಂಧ ಭಾರತ ಸರ್ಕಾರ ಜಾಗರೂಕತೆ ವಹಿಸಬೇಕು. ಭದ್ರತಾ ಪಡೆಗಳು ಭಾರತ ಬಾಂಗ್ಲಾ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈ ಗೊಂದಲದ ಪರಿಸ್ಥಿತಿಯಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾನದ ದಾಳಿಯನ್ನು ಪ್ರಾರಂಭಿಸಿವೆ. ಬಾಂಗ್ಲಾದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂ ಧಾರ್ಮಿಕ ಸ್ಥಳಗಳು, ಹಿಂದೂ ವ್ಯಾಪಾರ ಸಂಸ್ಥೆಗಳು ಮತ್ತು ಹಿಂದೂಗಳ ಮನೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು.
ಬಾಂಗ್ಲಾದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ ಹಿಂದೂ ರುದ್ರಭೂಮಿಗಳು, ನೂರಕ್ಕೂ ಹೆಚ್ಚು ದೇವಾಲಯಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಗುರಿಯಾಗದ ಯಾವುದೇ ಜಿಲ್ಲೆ ಬಾಂಗ್ಲಾದಲ್ಲಿ ಉಳಿದಿಲ್ಲ ಎಂದರು.
ಕಾಲಕಾಲಕ್ಕೆ ಸಂಭವಿಸುವ ಇಂತಹ ಗಲಭೆಗಳ ಪರಿಣಾಮ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಶೇ. ೩೨ ರಷ್ಟಿದ್ದ ಹಿಂದೂಗಳು ಈಗ ಶೇ. ೮ ಕ್ಕಿಂತ ಕಡಿಮೆ ಇದ್ದಾರೆ ಮತ್ತು ಅವರ ನಿರಂತರ ಜಿಹಾದಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳು, ಮಠ, ಅಂಗಡಿಗಳು, ಕಚೇರಿ, ವಾಣಿಜ್ಯ ಸಂಸ್ಥೆ, ಮಹಿಳೆಯರು ಮತ್ತು ಮಕ್ಕಳು, ಶ್ರದ್ಧಾ ಕೇಂದ್ರಗಳು ಸುರಕ್ಷಿತವಾಗಿಲ್ಲ. ಅಲ್ಲಿ ತುಳಿತಕ್ಕೊಳಗಾಗಿರುವ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸರ್ಕಾರ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯ ಸಂಯೋಜಕ ರಾಕೇಶ್ ಮರಡಿ, ಅಕ್ಷಯ್, ನರೇಂದ್ರ ಉಪಸ್ಥಿತರಿದ್ದರು.
VHP demands protection of Hindu minority in Bangladesh