ಚಿಕ್ಕಮಗಳೂರು: ಜಾತಿ, ಪಕ್ಷ ಇಲ್ಲದ ರೈತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಸ್ಪಂದಿಸಿ, ಶ್ರಮಿಸಬೇಕಾಗಿರುವುದು ಅಗತ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಶುಕ್ರವಾರ ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೭ ಗ್ರಾಮಗಳಿಗೆ ನೀರೊದಗಿಸುವ ಮಾದರಸನ ಕೆರೆ ಕೋಡಿ ಬಿದ್ದ ಪರಿಣಾಮ ಬಾಗಿನ ಅರ್ಪಿಸಿ ಮಾತನಾಡಿದರು.
ಸುಮಾರು ೭೦ ಕೋಟಿ ರೂ ವೆಚ್ಚದ ಬೈರಾಪುರ ಪಿಕಪ್ನಿಂದ ಮಾದರಸನ ಕೆರೆಗೆ ನೀರಾವರಿ ಯೋಜನೆಯನ್ನು ಬೀರೂರು ಕ್ಷೇತ್ರದ ಶಾಸಕ ಎಸ್.ಎಲ್ ಧರ್ಮೇಗೌಡ ಜಾರಿಗೆ ತರುವುದರಲ್ಲಿ ಶ್ರಮಿಸಿದ್ದರು ಎಂದರು.
ಈ ಬಾರಿ ದೈವ ಕೃಪೆಯಿಂದ ಹೆಚ್ಚು ಮಳೆ ಬಂದು ಕ್ಷೇತ್ರದ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿರುವುದು ಸಂತಸ ತಂದಿದೆ ಎಂದ ಅವರು ಈ ನಿಟ್ಟಿನಲ್ಲಿ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬಂದು ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಇಂತಹ ಅನ್ನದಾತನ ಕೆಲಸ ಮಾಡುವಲ್ಲಿ ಪಕ್ಷಬೇಧ, ಭಿನ್ನಾಭಿಪ್ರಾಯ ಮರೆತು, ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಬಂದು ಬಾಗಿನ ಅರ್ಪಿಸುವ ಕಾಯಕದಲ್ಲಿ ನಿರತರಾಗಬೇಕು ಎಂದು ತಿಳಿಸಿದರು.
ಮುಂದೆ ಭದ್ರಾ ಉಪಕಣಿವೆ, ರಣಘಟ್ಟ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಒಗ್ಗಟ್ಟಿನಿಂದ ಜಾರಿಮಾಡಲು ಬದ್ಧರಾಗಿದ್ದೇವೆ, ರೈತರ ವಿಚಾರದಲ್ಲಿ ಪಕ್ಷಾಧಾರಿದ ರಾಜಕಾರಣ ಸಲ್ಲದು. ಎಲ್ಲರೂ ಸೇರಿ ರೈತರಿಗೆ ನೆರವಾಗಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಮದರಸನ ಕೆರೆ ಕೋಡಿ ಬಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ಕಾವೇರಿ ಬೇಸಿನ್ ನೀರಾವರಿ ಯೋಜನೆಯಾಗಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಈ ಭಾಗದಲ್ಲಿ ಯಾವುದೇ ಹೊಸ ಯೋಜನೆ ಜಾರಿಮಾಡಬಾರದೆಂದು ತಡೆಯಾಜ್ಞೆ ನೀಡಲಾಗಿತ್ತು ಎಂದರು.
ಇಲ್ಲಿಂದ ಕೆಆರ್ಎಸ್ ವರೆಗೆ ಯಾವುದೇ ಹೊಸ ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ನ್ಯಾಯಾಲಯದ ಆದೇಶವಿದ್ದು, ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಾಸಕರಾಗಿದ್ದ ಎಸ್.ಎಲ್ ಧರ್ಮೇಗೌಡ ಅವರು ಭೈರಾಪುರ ಪಿಕಪ್ ಎಂದು ಮರು ನಾಮಕರಣ ಮಾಡಿ ಸುಮಾರು ೩.೫೦ ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದರು ಎಂದು ತಿಳಿಸಿದರು.
ಈ ಕೆರೆ ನೀರಾವರಿಯನ್ನು ಬಳಸುವ ಅಚ್ಚುಕಟ್ಟುದಾರರು ಕೆರೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಇದು ನಮ್ಮ ಕೆರೆ ಎಂಬ ಭಾವನೆ ೭ ಹಳ್ಳಿ ಗ್ರಾಮಸ್ಥರಲ್ಲಿ ಬರಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಮಾದರಸನ ಕೆರೆ ಕೋಡಿ ಬಿದ್ದು ಬಾಗಿನ ಅರ್ಪಿಸುತ್ತಿರುವ ಇಂತಹ ಪುಣ್ಯದ ಕಾಯಕದಲ್ಲಿ ಸರ್ವರೂ ಭಾಗಿಯಾಗಿ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಹೇಳಿದರು.
೨೦೧೩ ರಲ್ಲಿ ದಾಸರಹಳ್ಳಿ ಕೆರೆಗೆ ೪.೫೦ ಕೋಟಿ ರೂ ಅನುದಾನ ಮಂಜೂರು ಮಾಡಿಸಿ, ಲಕ್ಯಾ ಹೋಬಳಿಯ ಗ್ರಾಮಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ಮುಂದಾದಾಗ ಶಾಸಕ ಸಿ.ಟಿ ರವಿ ಅವರು ಕೃಷ್ಣ ಬೇಸಿನ್, ಕಾವೇರಿ ಬೇಸಿನ್ ವ್ಯಾಪ್ತಿಗೆ ಈ ಕೆರೆ ಬರುತ್ತದೆ ಎಂದು ಹೇಳಿ ತಡೆದರು ಎಂದು ಆರೋಪಿಸಿದರು.
ಈಗ ಸಮೃದ್ಧ ಮಳೆಯಾಗುತ್ತಿರುವುದರಿಂದ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿದೆ ಎಂದು ಹಾರೈಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೦ ಕೋಟಿ ರೂಗಳನ್ನು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದೆಂದರು.
ಹಿಂದೆ ಶಾಸಕರಾಗಿದ್ದ ಸಿ.ಟಿ ರವಿಯವರ ಅವಧಿಯಲ್ಲಿ ಬಯಲು ಭಾಗಕ್ಕೆ ಯಾವುದೇ ನೀರಾವರಿ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆಂದು ದೂರಿದ ಅವರು. ರೈತರು, ಕೂಲಿ ಕಾರ್ಮಿಕರಿಗೆ ಇವರ ಅವಧಿಯಲ್ಲಿ ಯಾವುದೇ ಜನಪರವಾದ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ, ವಕ್ತಾರ ರವೀಶ್ ಬಸಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಲಕ್ಯಾ ಗ್ರಾ.ಪಂ ಅಧ್ಯಕ್ಷ ಹನೀಫ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಗ್ರಾಮಸ್ಥರಾದ ಶಶಿಧರ್, ರವಿ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
MLA H. D. Tammayya offered a bag to the Madrasan lake where Kodi fell