ಚಿಕ್ಕಮಗಳೂರು: ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿದವರು ಬ್ರಹ್ಮ ಶ್ರೀ ನಾರಾಯಣ ಗುರು ಎಂದು ಸಾಹಿತಿ ತಿಪ್ಪೇರುದ್ರಪ್ಪ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿಶ್ವಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದವರು. ನಾರಾಯಣಗುರುಗಳು, ಯೂರೋಪಿಯನ್ನರು ವಸಾಹತು ಸ್ಥಾಪಿಸಿ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದು, ರಾಜಕೀಯ ರಂಗದ ಗೋಳು, ಇದೇ ಕಾಲದಲ್ಲಿ ಸಾಮಾಜಿಕ ಸ್ಥಿತಿ ಇನ್ನೂ ನೋವಿನ ಸಂಗತಿಯಾಗಿತ್ತು.
ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದವರನ್ನು ಶೋಷಣೆ ಮಾಡಲಾಗುತ್ತಿತ್ತು, ಕೇರಳದ ಬಹುಸಂಖ್ಯಾತ ಈಳವ ಜನಾಂಗ ಕೂಡ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯದಲ್ಲಿ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿರಲಿಲ್ಲ. ಮಹಿಳೆಯರು ಕುಪ್ಪಸ ತೊಡುವಂತ್ತಿರಲಿಲ್ಲ.
ಆಭರಣ ಧರಿಸುವಂತಿರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ, ಇಂಥ ಸಂದರ್ಭದಲ್ಲಿ ಸಾಮಾಜಿಕ ಸುಧಾರಾಣೆಗಾಗಿ ಬಂದ ಗುರುಗಳು ಕಂದಾಚಾರ, ಮೂಡನಂಬಿಕೆಗಳನ್ನು, ಆವಿಚಾರಗಳನ್ನು ಟೀಕಿಸಿ ಸರಿಪಡಿಸಲು ಶ್ರಮಿಸಿದರು ಎಂದರು.
ವಿದ್ಯೆಯನ್ನು ಪಡೆದು ಸ್ವತಂತ್ರರಾಗಿರಿ, ಸಂಘಟನೆಯಿಂದ ಶಕ್ತಿವಂತರಾಗಿರಿ ಎಂದು ಸಂದೇಶ ಸಾರಿದರು. ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ ಬದಲಾಗಿ ಆತ ಬದುಕಿನ ನೀತಿಯಿಂದ, ರೀತಿಯಿಂದ ದೊಡ್ಡವನಾಗುತ್ತಾನೆ ಎಂದು ತೋರಿಸಿಕೊಟ್ಟವರು ನಾರಾಯಣಗುರು ಎಂದುಹೇಳಿದರು.
ನಾರಾಯಣಗುರುಗಳು ಕೇವಲ ಒಂದು ಜನಾಂಗದ ಗುರು ಅಲ್ಲ, ಅವರು ಮಾನವ ಜನಾಂಗದ ಗುರು, ಸಾಮಾಜಿಕ ಕ್ರಾಂತಿಯ ಹರಿಕಾರ ಎಂದ ಅವರು ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಮತಾಂತರವನ್ನು ತಪ್ಪಿಸಿದರು, ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕ್ರಾಂತಿಕಾರ ಹೋರಾಟ ಮಾಡಿದರು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಕಂದಾಯ ಶಾಖೆಯ ಶಿರಸ್ತೆದಾರ ಎಂ.ಸಿ. ಹೇಮಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Brahma Shri Narayan Guru Jayanti Program