ಚಿಕ್ಕಮಗಳೂರು: ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡು ಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿಸಿದವರು ದಿ. ಡಿ.ದೇವರಾಜ ಅರಸು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಇಂದು ತೇಗೂರಿನ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಡಿ. ದೇವರಾಜ ಅರಸುರವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಡಿ. ದೇವರಾಜ ಅರಸುರವರು ಹಲವಾರು ಸುಧಾರಣೆಗಳನ್ನು ಮಾಡಿದರು. ಭೂ ಸುಧಾರಣಾ ಕಾಯಿದೆ ಸೇರಿದಂತೆ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಜೊತೆಗೆ ಬಡ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್, ಮೀಸಲಾತಿ ಸೌಲಭ್ಯ ಒದಗಿಸಿದ್ದಾರೆ. ಹಿಂದುಳಿದ ವರ್ಗದವರು ಹಾಗೂ ಶೋಷಿತ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದ ಅವರು ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಮೌನ ಕ್ರಾಂತಿಯ ಹರಿಕಾರ ಎಂದು ಹೇಳಿದರು.
ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಿ ದಿ. ಡಿ. ದೇವರಾಜ ಅರಸುರವರು ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಸೇರಿದಂತೆ ಮತ್ತಿತರ ಮಹಾನೀಯರ ಸಿದ್ದಾಂತ ಮೈಗೂಡಿಸಿಕೊಂಡಿದ್ದರು. ವಿದ್ಯೆ ಕಲಿತು ಸಾಕಷ್ಟು ಜ್ಞಾನ ಪಡೆದ ಅವರು ಯಾವುದೇ ನೌಕರಿಗೆ ಹೋಗದೇ ತಮ್ಮ ಸ್ವಂತ ಗ್ರಾಮಕ್ಕೆ ಬಂದು ಕೃಷಿ ಕಾರ್ಯ ಕೈಗೊಂಡು ತಮ್ಮ ಗ್ರಾಮಕ್ಕೆ ಮಾದರಿಯಾಗುವ ಹಾಗೆ ಕೆಲಸ ಮಾಡಿದರು ಎಂದರು.
ಬಡವರ ಸಮಸ್ಯೆಯನ್ನು ಮನೆಯಲ್ಲಿ ಕುಳಿತು ಕೇಳಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದರು. ಮುಂದೆ ಒಂದು ದಿನ ಅವರು ಜನ ನಾಯಕರಾಗಿ ಹೊರ ಹೊಮ್ಮಿದರು. ಡಿ. ದೇವರಾಜ ಅರಸುರವರು ಹಿಂದುಳಿದ ವರ್ಗದ ಧ್ವನಿಯಾಗಿದ್ದರು. ಉಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದವರಲ್ಲದೆ, ಸೂರು ಇಲ್ಲದವರಿಗೆ ಸೂರು ಒದಗಿಸಿದರು, ವೃದ್ದಾಪ್ಯ ವೇತನ, ಅಂಗವಿಕಲ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದು ತಿಳಿಸಿದರು.
ಇಂದು ಬೆಂಗಳೂರು ನಗರವು ಸಿಲಿಕಾನ್ ಕಣಿವೆಯೆಂದು, ಮಾಹಿತಿ ತಂತ್ರಜ್ಞಾನದ ರಾಜಧಾನಿಯೆಂದು ಪ್ರಸಿದ್ಧಿಯಾಗಲು ಅರಸುರವರ ದೂರದೃಷ್ಟಿಯೇ ಕಾರಣ ಅಲ್ಲದೇ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಬೆಂಗಳೂರು ದಾಪುಗಾಲು ಹಾಕಲು ಅಡಿಗಲ್ಲಿಟ್ಟವರೇ ಅರಸುರವರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಜಿಲ್ಲಾ ಅರಸು ಸಂಘದ ಅಧ್ಯಕ್ಷರಾದ ಮಧುಕುಮಾರ್ ರಾಜ್ ಅರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘದ ಮುಖ್ಯಸ್ಥ ಕೆ.ಟಿ. ರಾಧಾಕೃಷ್ಣ, ಅರಸು ಸಂಘದ ಕಾರ್ಯದರ್ಶಿ ದಶರಥ ರಾಜ ಅರಸ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಆರ್. ಬಡಿಗೇರ್, ಜಿಲ್ಲಾ ಅರಸು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
D. Devaraja Arasura’s 109th birth anniversary program