ಬಾಳೆಹೊನ್ನೂರು: ಹೂವು ಒಂದೇ ದಿನ ಬಾಳಿದರೂ ನಾಲ್ಕು ಜನಕ್ಕೆ ಪರಿಮಳ ಕೊಟ್ಟು ಹೋಗುತ್ತದೆ. ಮನುಷ್ಯ ಸಹ ಸದ್ಗುಣ ಸಂಪಾದಿಸಿ ಬಾಳಿದರೆ ಬದುಕು ಉಜ್ವಲ. ಸಾಧನೆಯ ಗೆಲುವು ದುಡಿಯುವ ಕೈಗಳಿಂದ ಬರುತ್ತದೆ ಹೊರತು ಅಂಗೈನ ಅದೃಷ್ಟ ರೇಖೆಗಳಿಂದಲ್ಲ ಎಂಬುದನ್ನು ಯಾರೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಕೈಕೊಂಡ ಶ್ರಾವಣ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಒಳ್ಳೆಯದನ್ನೇ ಯೋಚನೆ ಮಾಡಿದರೆ ಒಳ್ಳೆಯದೇ ಆಗುತ್ತದೆ. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ ಈ ಜಗತ್ತು ತುಂಬಾ ಸುಂದರವಾಗಿ ಕಾಣುತ್ತದೆ. ಸಮಯದ ಜೊತೆ ನಡೆಯದೇ ಸತ್ಯದ ಜೊತೆ ಹೆಜ್ಜೆ ಹಾಕುವುದು ಶ್ರೇಷ್ಠ. ಬೇರೆಯವರಿಗೆ ದಾರಿ ತೋರಿಸಲು ನೀನು ದೀಪ ಬೆಳಗಿದರೆ ಅದು ನಿನ್ನ ದಾರಿಗೆ ಬೆಳಕು ಚೆಲ್ಲುತ್ತದೆ.
ಗೆದ್ದವರು ಸಂತೋಷದಿಂದ ಸೋತವರು ಯೋಚಿಸುತ್ತಾ ಇರುತ್ತಾರೆ. ಆದರೆ ಸೋಲು ಗೆಲುವು ಶಾಶ್ವತ ಅಲ್ಲವೆಂದು ತಿಳಿದು ಬಾಳಿದವರು ಮಹಾತ್ಮರಾಗಿ ಜಗಕ್ಕೆ ಬೆಳಕು ತೋರಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಅತ್ಯಮೂಲ್ಯವಾದ ಮಾನವ ಜೀವನದ ಸಾಫಲ್ಯಕ್ಕಾಗಿ ತೋರಿದ ದಾರಿ ಹಾಗೂ ಕೊಟ್ಟ ಸಂದೇಶ ಸರ್ವರಿಗೂ ಸುಖಶಾಂತಿ ಬದುಕಿಗೆ ಆಶಾಕಿರಣವಾಗಿದೆ. ಅರಿತು ಬಾಳಿದರೆ ಬಾಳು ಬಂಗಾರ ಮರೆತು ಬಾಳಿದರೆ ಬಾಳು ಬಂಧನಕಾರಿ ಎಂದರು.
‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ್ ದೇವರು ಮಾತನಾಡಿ ಆಕಾಶದಿಂದ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿಂದ ಗಿಡ ಮರಗಳು ಬದುಕುತ್ತವೆ. ಹಾಗೆಯೇ ನಮಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬ ದೃಢ ನಂಬಿಕೆಯಿಂದ ನಡೆದರೆ ಬದುಕು ಸಾರ್ಥಕಗೊಳ್ಳುತ್ತದೆ.
ಶ್ರೀ ಜಗದ್ಗುರು ರೇಣುಕಾಚಾರ್ಯರ ಜಗತ್ಕಲ್ಯಾಣ ಮಹತ್ಕಾರ್ಯಗಳು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿವೆ ಎಂದರು. ನೇತೃತ್ವ ವಹಿಸಿದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಿಲ್ಲು ಬಾಗಿದರೆ ಮಾತ್ರ ಬಾಣ ಮುಂದೆ ಹೋಗುತ್ತದೆ. ಅದೇ ರೀತಿ ದೇಹ ಬಾಗಿದಾಗ ಮಾತ್ರ ಜೀವನ ಮುಂದೆ ಸಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮಾನವೀಯತೆಯ ಆದರ್ಶ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು. ಈ ಪವಿತ್ರ ಸಮಾರಂಭದಲ್ಲಿ ಆಲಮೇಲ ಚಂದ್ರಶೇಖರ ಶ್ರೀಗಳು, ತಡವಲಗಾ ರಾಚೋಟೇಶ್ವರ ಶ್ರೀಗಳು, ಯಂಕಂಚಿ ರುದ್ರಮುನಿ ಶ್ರೀಗಳು, ಗುಂಡನಾಳ ಗುರುಲಿಂಗ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ದಾವಣಗೆರೆ ಡಾ.ಎಸ್.ಕೆ. ಕಾಳಪ್ಪನವರ, ಪತ್ರಕರ್ತ ಪ್ರಶಾಂತ ರಿಪ್ಪನ್ಪೇಟೆ, ರುದ್ರಯ್ಯ ದೊಡ್ಡಬ್ಬಿಗೇರಿ, ರಾಣೆಬೆನ್ನೂರಿನ ಸಿದ್ಧಲಿಂಗಯ್ಯ ಹಿರೇಮಠ, ಬಮ್ಮನಹಳ್ಳಿ ವೀರಣ್ಣ, ಬಾಳೆಹೊನ್ನೂರು ಐಟಿಐ ಉಮೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಸೇವಾ ಮಾಡಿದ ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವಾದ ಗುರುರಕ್ಷೆಯಿತ್ತರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಗಿನ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಶ್ರೀ ಪೀಠದ ಎಲ್ಲ ಕುಲದೈವಕ್ಕೆ ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿ ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ನೆರವೇರಿತು.
Kaikonda Shravana Taponushtana and Purana Pravachana Dharma Ceremony held at Sri Rambhapuri Peetha