ಚಿಕ್ಕಮಗಳೂರು: ತಾಲ್ಲೂಕಿನ ಸಖರಾಯಪಟ್ಟಣದ ಹುಲಿಕೆರೆಯ ಬೆರಟಿಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತಿತರರು ಭಾನುವಾರ ಕೆರೆಗೆ ಬಾಗೀನ ಅರ್ಪಿಸಿದರು.
ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಾವೇನೇ ಮಾಡಿದರು ದೈವ ಕೃಪೆಯೇ ಮುಖ್ಯ. ಇಂದು ಎಲ್ಲೆಡೆ ಒಳ್ಳೆಯ ಮಳೆಯಾಗಿ ಡ್ಯಾಂಗಳು, ಕೆರೆ, ಕಟ್ಟೆಗಳು ತುಂಬಿ ತುಳುಕುತ್ತಿವೆ. ನಾವೆಲ್ಲರೂ ಸಾಮೂಹಿಕವಾಗಿ ಒಳ್ಳೆಯ ಮಳೆ, ಬೆಳೆ, ರೈತರಿಗೆ ಒಳ್ಳೆಯ ಬೆಲೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಇದರೊಂದಿಗೆ ಬೆಳವಾಡಿಕೆರೆ, ದೇವನೂರು ಕೆರೆಗಳೂ ಕೋಡಿ ಬೀಳಬೇಕು ಎನ್ನುವುದು ನಮ್ಮ ಪ್ರಾರ್ಥನೆ. ಹಿಂದೆ ಸರ್ಕಾರದಲ್ಲಿ ಸಿ.ಟಿ.ರವಿ ಮಂಜೂರು ಮಾಡಿಸಿದ ೯ ಕೋಟಿ ರೂ. ಬೆಲೆಯ ಅಯ್ಯನ ಕೆರೆ ಕಾಲುವೆ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ವರ್ಷಗಳಲ್ಲಿ ಸತತವಾಗಿ ಕೆರೆ ಪ್ರತಿ ವರ್ಷ ಕೋಡಿ ಬೀಳುತ್ತದೆ. ಅಭಿವೃದ್ಧಿ ಹಾಗೂ ರೈತರಿಗೆ ನೀರು ಕೊಡುವ ವಿಷಯದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಗವಂತನ ಆಶೀರ್ವಾದ ಇಲ್ಲವಾದರೆ ಹುಲ್ಲುಕಡ್ಡಿ ಸಹ ಅಲುಗಾಡುವುದಿಲ್ಲ. ಯೋಗಾ ಯೋಗ ಈ ವರ್ಷ ರಾಜ್ಯದ ಉದ್ದಗಲಕ್ಕೂ ಒಳ್ಳೆ ಮಳೆಯಾಗಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ನಮ್ಮ ಭಾಗದ ದೊಡ್ಡ ಕೆರೆಗಳಾದ ಬೆಳವಾಡಿ ಮತ್ತು ದೇವನೂರು ಕೆರೆ ಶೀಘ್ರ ಭರ್ತಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಗಂಗೆಗೆ ಪೂಜೆ ಮಾಡುವುದು ಭಾರತದ ಸನಾತವಾದ ಸಂಸ್ಕೃತಿ, ನಾವು ಪ್ರಕೃತಿ ಆರಾಧಕರು, ಪಂಚಭೂತಗಳಲ್ಲಿ ದೈವತ್ವವನ್ನು ಕಾಣುವಂತಹವರು. ಜಗತ್ತಿನ ಉದ್ದಗಲಕ್ಕೂ ಭಗವಂತ ಆವರಿಸಿಕೊಂಡಿದ್ದಾನೆ. ಎನ್ನುವ ನಂಬಿಕೆ ಇಟ್ಟವರು. ಹಾಗೂ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಸಂಸ್ಕೃತಿಯ ಭಾಗವಾಗಿದೆ ಈ ಕಾರಣಕ್ಕೆ ಗಂಗೆಯನ್ನು ಕೃತಜ್ಞತೆಯಿಂದ ಪೂಜೆ ನೆರವೇರಿಸಿದ್ದೇವೆ ಎಂದರು.
ಬೆರಟಿಕೆರೆ ಕಾಲುವೆ ಕಾಮಗಾರಿಗೆ ೯.೮೬ ಕೋಟಿ ರೂ. ಬಿಡುಗಡೆಗೆ ೨೦೨೦ ರಲ್ಲಿ ಪತ್ರ ಬರೆದು ೨೦೨೩ ರಲ್ಲಿ ಭೂಮಿ ಪೂಜೆ ನೆರವೇರಿಸಿದ್ದೆವು. ಈಗ ಕಾಮಗಾರಿ ಪ್ರಾಂರಂಭವಾಗಿದೆ. ಪ್ರತಿ ವರ್ಷ ಕೆರೆಗೆ ಬಾಗಿನ ಬಿಡುವ ಸುಯೋಗ ಒದಗಿಬರಲಿ. ಇದರ ಜೊತೆಗೆ ೧೨೮೧ ಕೋಟಿ ರೂ. ವೆಚ್ಚದ ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಯ ಎರಡನೇ ಹಂತದ ಕಾಮಗಾರಿ ಸಹ ಪ್ರಾರಂಭವಾಗಿದೆ.
ಮೂರನೇ ಹಂತದಲ್ಲಿ ನಮ್ಮ ಚಿಕ್ಕಮಗಳೂರು ತಾಲ್ಲೂಕಿನ ಲಕ್ಯ ಹಾಗೂ ಸಖರಾಯಪಟ್ಟಣ ಭಾಗದ ಎಲ್ಲಾ ಕೆರೆಗಳು ಭರ್ತಿ ಆಗಲಿವೆ. ನಾವು ಅಭಿವೃದ್ಧಿ ವಿಚಾರ ಬಂದಾಗ ಹೆಚ್ಚು ಕೆಲಸ ಮಾಡಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಬೆರಟಿಕೆರೆ ಚಾನಲ್ಗೆ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಿವರಾಜ ತಂಗಡಗಿ ಅವರು ೧ ಕೋಟಿ ರೂ. ಬಿಡುಗಡೆ ಮಾಡಿದ ಪರಿಣಾಮ ಕೆರೆ ತುಂಬಲು ಕಾರಣವಾಗಿದೆ ಎಂದರು.ಗ್ರಾ.ಪಂ.ಉಪಾಧ್ಯಕ್ಷೆ ಪವಿತ್ರ, ಸದಸ್ಯರುಗಳಾದ ಜ್ಯೋತಿ, ಭಾರತಿ, ಪುಷ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಪಿಳ್ಳೇನಹಳ್ಳಿಯ ರಮೇಶ್, ಮಂಜು ಇತರರು ಇದ್ದರು.
Bagi offering to Beratikere of Hulikere, Sakharayapatnam