ಚಿಕ್ಕಮಗಳೂರು: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಿರೇಗೌಜ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಗೌಜ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಲಕ್ಯಾ-೧ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಈ ಹಿಂದೆ ವಿದ್ಯಾರ್ಥಿಗಳಿಗೆ ಹೆಚ್ಚು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು. ಈಗ ಅದಕ್ಕಿಂತ ಹೆಚ್ಚು ಪ್ರೋತ್ಸಾಹಿಸುತ್ತಿರುವುದು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಇಂದು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ವಲಯ, ತಾಲ್ಲೂಕು, ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಹೋಗುವುದರ ಜೊತೆಗೆ ದೇಶದ ಉನ್ನತ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದರು.
ಭಾರತ ಒಲಂಪಿಕ್ ಕ್ರೀಡೆಯಲ್ಲಿ ಸ್ವರ್ಣ ಪದಕದ ಜೊತೆಗೆ ಅತೀ ಹೆಚ್ಚು ಪದಕ ಗಳಿಸುವ ಮೂಲಕ ಪ್ರಪಂಚದಲ್ಲೇ ಕೀಡೆಯಲ್ಲಿ ಮುಂಚೂಣಿ ರಾಷ್ಟ್ರವಾಗಿತ್ತು. ಕ್ರಿಕೆಟ್ನಲ್ಲೂ ವಿಶ್ವಕಪ್ ಗೆದ್ದು ಕ್ರೀಡೆ ಮಹತ್ವ ತಿಳಿಸಿದೆ ಎಂದು ಬಣ್ಣಿಸಿದರು.
ಗ್ರಾಮೀಣ ಮಟ್ಟದ ಈ ಕ್ರೀಡಾಕೂಟದಲ್ಲಿ ಹಳ್ಳಿ ಮಕ್ಕಳಲ್ಲಿ ಅತೀ ಹೆಚ್ಚು ಕ್ರೀಡಾ ಮನೋಭಾವವನ್ನು ಕಾಣುತ್ತಿದ್ದೇವೆ. ಕಬ್ಬಡ್ಡಿ, ಕೋಕೋ, ವಾಲೀಬಾಲ್ ಮುಂತಾದ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿವಹಿಸಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿ ಪ್ರತಿಭೆಗಳು ಅತೀ ಹೆಚ್ಚು ಭಾಗವಹಿಸಿ ಸದೃಢರಾಗಬೇಕು. ಜಾವಲಿನ್ ಥ್ರೋ ಕ್ರೀಡೆಯಲ್ಲಿ ನೀರಜ್ ಛೋಪ್ರಾ ಪದಕ ಬೆಳ್ಳಿ ಪದಕ ಗೆದ್ದುಬಂದ ಗ್ರಾಮೀಣ ಭಾಗದ ಕ್ರೀಡಾಪಟು ಆಗಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಹೆಚ್ಚು ಪದಕಗಳನ್ನು ಗಳಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು. ಇದಕ್ಕೆ ದೈಹಿಕ ಶಿಕ್ಷಕರು ಪೂರಕವಾಗಿ ಸ್ಪಂದಿಸಿ, ಪ್ರತಿಭೆಗಳನ್ನು ಗುರ್ತಿಸುವ ಕಾರ್ಯ ಮಾಡಬೇಕೆಂದು ಕರೆನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಶ್ರೀನಾಥ್ ವಹಿಸಿದ್ದರು. ಹಿರೇಗೌಜ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಧ್ವಜಾರೋಹಣ ನೆರವೇರಿಸಿದರು. ಸದಸ್ಯರುಗಳಾದ ಶಿವಕುಮಾರ್, ಹಾಲೇಗೌಡ, ಸುರೇಶ್, ಪರಶುರಾಮ್, ನಾಗರಾಜ್, ಪರಮೇಶ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.ಚಿಕ್ಕಗೌಜ ಶಾಲೆಯ ಮುಖ್ಯ ಶಿಕ್ಷಕ ಕುಮಾರ್ ಸ್ವಾಗತಿಸಿದರು.
Hobli level senior primary schools sports meet