ಚಿಕ್ಕಮಗಳೂರು: ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಯ ಸ್ಪರ್ಶಕ್ಕೊಳಗಾಗಿ ಕಾಡಾನೆಯೊಂದು ಅಸುನೀಗಿರುವ ಘಟನೆ ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಕೊಳಗಾಮೆ ಗ್ರಾಮದಲ್ಲಿರುವ ಆಶ್ರಯ ಕಾಫಿ ಎಸ್ಟೇಟ್ ಬಳಿ ಸೋಮವಾರ ಮಧ್ಯರಾತ್ರಿ ಆಹಾರ ಅರಸಿ ಕಾಡಾನೆಯೊಂದ ತೋಟಕ್ಕೆ ನುಗ್ಗಲು ಯತ್ನಿಸಿದ್ದ ವೇಳೆ ಕಾಫಿ ತೋಟಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಪ್ರಾಣ ಬಿಟ್ಟಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ಕಾಡಾನೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ತೋಟದ ಬೇಲಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿ ಕಾಡಾನೆ ಸಾವಿಗೆ ಕಾರಣರಾದ ಎಸ್ಟೇಟ್ ಮಾಲಕರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಸಾಮಾನ್ಯವಾಗಿದ್ದು, ಕಾಡಾನೆಗಳ ದಾಳಿಯಿಂದಾಗಿ ಜಿಲ್ಲೆಯಲ್ಲಿ ರೈತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ರೈತರು ಬೆಳೆ ಉಳಿಸಿಕೊಳ್ಳಲೂ ಹರಸಾಹಸ ಪಡುತ್ತಿದ್ದಾರೆ.
ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್ ಗುರುತಿಸಿ ಅಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಬೇಕು ಎಂಬ ರೈತರ ಆಗ್ರಹಕ್ಕೆ ಇದುವರೆಗೂ ಸರಕಾರ, ಜನಪ್ರತಿನಿಧಿಗಳು ಸ್ಪಂದಿಸಿಲ್ಲ.
ಕಾಡಾನೆಗಳ ಹಾವಳಿ ಇರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸೋಲಾರ್ ಬೇಲಿ ಅಳವಡಿಕೆಯಂತಹ ಕ್ರಮಗಳನ್ನು ಕೈಗೊಂಡಿದ್ದರೂ ಕಾಡಾನೆಗಳ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಪರಿಣಾಮ ರೈತರು, ಕಾಫಿ ತೋಟಗಳ ಮಾಲಕರು ಬೆಳೆ ಉಳಿಸಿಕೊಳ್ಳುವ ಉದ್ದೇಶದಿಂದ ಅಲ್ಲಲ್ಲಿ ತೋಟದ ಬೇಲಿಗೆ ವಿದ್ಯುತ್ ಅಳವಡಿಸಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕಡೆಗಳಲ್ಲಿ ಕಾಡು ಪ್ರಾಣಿಗಳು ವಿದ್ಯುತ್ ಅಘಾತದಿಂದ ಸಾವನ್ನಪ್ಪುತ್ತಿವೆ.
Kadane dies due to contact with electric wire