ಚಿಕ್ಕಮಗಳೂರು:ಒಳ್ಳೆಯ ಆರೋಗ್ಯ ಮತ್ತು ಸದೃಢ ದೇಹ ಹೊಂದಲು ಕ್ರೀಡೆಗಳು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೇಳಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳಲೂರು ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಂಬಳೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ-೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಜಯಗಳಿಸಿ, ಶಾಲೆಗೆ, ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು, ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ನಗರದ ಆಶಾ ಕಿರಣ ಅಂಧಮಕ್ಕಳ ಪಾಠಶಾಲೆಯ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಕಲಾಂಗ ಚೇತನರು ಕ್ರೀಡೆಯಲ್ಲಿ ಭಾಗವಹಿಸಬಹುದೆಂದು ತೋರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಧ್ವಜಾರೋಹಣ ನೆರವೇರಿಸಿದ ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ಮಾತನಾಡಿ, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ, ಸದೃಢ ಹಾಗೂ ಆರೋಗ್ಯವಂತ ವ್ಯಕ್ತಿಯಾಗಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸೋಲು-ಗೆಲುವು ಮುಖ್ಯ ಅಲ್ಲ, ಕ್ರೀಡಾ ಸ್ವರ್ಧೆಯಲ್ಲಿ ಭಾಗವಹಿಸುವುದು ಅಗತ್ಯ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣರಾಜ ಅರಸ್, ಸುಂದರೇಶ್, ಶಿವಪ್ಪ, ಶ್ರೀನಿವಾಸ್, ಕಿರಣ್ ಕುಮಾರ್, ಸುರೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷೆ ವಿಲ್ಮಾ, ಸುಮತ್ರ, ಚಂದ್ರಕಾಂತ್, ಶಿವಕುಮಾರ್, ಮತ್ತಿತರರು ಭಾಗವಹಿಸಿದ್ದರು. ಮೊದಲಿಗೆ ಮುಖ್ಯ ಶಿಕ್ಷಕ ಹೆಚ್.ಬಸಪ್ಪ ಸ್ವಾಗತಿಸಿದರು.
Ambale Hobli Level Senior Primary Schools Sports