ಚಿಕ್ಕಮಗಳೂರು: ಕರಕುಶಲ ಮತ್ತು ಕುಶಲಕರ್ಮಿಗಳ ಕೈ ಬಲಪಡಿಸುವಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪಾತ್ರ ಮಹತ್ವದಾಗಿದೆ. ಈ ಯೋಜನೆಯಡಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್ ಕಿಟ್ಗಳನ್ನು ಒದಗಿಸಿ ಅರ್ಹರಿಗೆ ಸಾಲ ಮಂಜೂರು ಮಾಡಲು ಅಗತ್ಯ ಕ್ರಮ ವಹಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಇಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕರಕುಶಲ ಮತ್ತು ಕುಶಲ ಕರ್ಮಿಗಳನ್ನು ಆರ್ಥಿಕವಾಗಿ ಬಲಪಡಿಸಿ ಅವರ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯ ಫಲವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದರು.
ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಬಡಗಿಗಳು, ಶಿಲ್ಪಿಗಳು, ಕಮ್ಮಾರರು, ಮರಗೆಲಸಗಾರರು, ಕುಂಬಾರಿಕೆ, ಮಾಲಾಕಾರರು, ಮೇಸ್ತ್ರಿಗಳು ಸೇರಿದಂತೆ ವಿವಿಧ ಕುಶಲಕರ್ಮಿಗಳಿಗೆ ಗುಣಮಟ್ಟದ ತರಬೇತಿ ನೀಡಬೇಕು. ತರಬೇತಿ ಸಮಯದಲ್ಲಿ ದಿನಕ್ಕೆ ರೂ. ೫೦೦ ನಂತೆ ಸ್ಟೇ ಪಂಡ್ ಹಾಗೂ ತರಬೇತಿ ನಂತರದಲ್ಲಿ ರೂ. ೧೫,೦೦೦ ಉಚಿತ ಟೂಲ್ ಕಿಟ್ಗಳನ್ನು ಒದಗಿಸಿ ಸಾಲದ ಅವಶ್ಯಕತೆ ಇರುವ ಅರ್ಹ ಅಭ್ಯರ್ಥಿಗಳಿಗೆ ಸಾಲ ಮಂಜೂರು ಮಾಡಿ ಅವರ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು.
ಜಿಲ್ಲೆಯಲ್ಲಿ ಇನ್ನೂ ಒಂದು ವಾರದೊಳಗಾಗಿ ತರಬೇತಿ ಕೇಂದ್ರಗಳನ್ನು ತೆರೆಯಲು ಅಗತ್ಯ ಕ್ರಮವಹಿಸಬೇಕು. ಈಗಾಗಲೇ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಶೀಘ್ರವಾಗಿ ಟೂಲ್ ಕಿಟ್ಗಳನ್ನು ನೀಡಬೇಕು ಎಂದ ಅವರು ಯೋಜನೆಯ ಫಲವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಹೆಚ್.ಸಿ. ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೪೩೬೯೭ ಅರ್ಜಿಗಳು ಸ್ವೀಕೃತವಾಗಿದ್ದು, ೫೮೯೬ ಅರ್ಜಿಗಳು ಅನುಮೋದನೆಗೊಂಡಿದೆ ಇವುಗಳಲ್ಲಿ ೨೧೮೬ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ ಹಾಗೂ ೧೬೩ ಅಭ್ಯರ್ಥಿಗಳಿಗೆ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ೧೧ ತರಬೇತಿ ಕೇಂದ್ರವನ್ನು ತೆರೆಯಲು ಸ್ಥಳ ಗುರುತಿಸಿ ಕ್ರಮ ವಹಿಸಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ, ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಚಂದ್ರಶೇಖರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್, ವಿಶ್ವ ಕರ್ಮ ಯೋಜನೆ ಸಲಹಾ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Pradhan Mantri Vishwakarma Yojana meeting