ಕ್ರೀಡೆಯಲ್ಲಿ ಗೆಲ್ಲಲು ಆತ್ಮವಿಶ್ವಾಸ ಮುಖ್ಯ
ಚಿಕ್ಕಮಗಳೂರು: ಆಟದ ಮೈದಾನದಲ್ಲಿ ಸೋತ ವ್ಯಕ್ತಿ ಮತ್ತೆ ಗೆಲ್ಲಬಹುದು ಆದರೆ ಆತ್ಮ ವಿಶ್ವಾಸ ಕಳೆದುಕೊಂಡವರು ಮತ್ತೆ ಗೆಲ್ಲಲಾರ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸವೇ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ ರವೀಶ್ ಅಭಿಪ್ರಾಯಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸೇಂಟ್ ಮೇರೀಸ್ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ‘ಬಿ’ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ-೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡಾಕೂಟದಲ್ಲಿ ಸುಮಾರು ೧೪ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಾಧನೆ, ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸುವ ಮೂಲಕ ಜೀವನದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರತೀ ಯಶಸ್ಸಿನ ಹಿಂದೆ ಅನೇಕ ಪ್ರಯತ್ನಗಳು ಇರುತ್ತವೆ. ಅವುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಅನಾವರಣಗೊಂಡು ಜಯಗಳಿಸಲು ಸಹಕಾರಿಯಾಗುತ್ತದೆ. ಇಲ್ಲಿ ಸಾಧನೆ ಮಾಡಿ ಆಯ್ಕೆಯಾದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಹೋಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ಕ್ರೀಡಾಪಟು ದ್ಯಾನ್‌ಚಂದ್ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೇಂಟ್ ಮೇರೀಸ್ ಸಮೂಹ ಶಾಲೆಗಳ ಸಂಸ್ಥಾಪಕ ಜೆರಾಲ್ಡ್ ಲೋಬೋ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿ ಅದನ್ನು ಸತತ ಅಭ್ಯಾಸ ಮಾಡಿದಾಗ ಗೆಲುವು ನಿಮ್ಮದಾಗುತ್ತದೆ ಎಂದು ಹೇಳಿದರು.
ಅಭ್ಯಾಸ ಮಾಡುವಲ್ಲಿ ಸೋತರೆ ಸ್ವಯಂ ವಿಶ್ಲೇಷಣೆ ಮಾಡಿಕೊಂಡು ಇದಕ್ಕೆ ಕಾರಣ ಹುಡುಕುತ್ತ ಬೇರೆಯವರು ಗೆಲ್ಲುತ್ತಾರೆ. ಅವರ ಸಮಯ ಹೇಗೆ ಚನ್ನಾಗಿದೆ ಎಲ್ಲದರ ಬಗ್ಗೆಯೂ ಚಿಂತನೆ ಮಾಡಿ ತಮ್ಮ ತಪ್ಪನ್ನು ತಿದ್ದಿಕೊಂಡಾಗ ಯಶಸ್ವಿಯಾಗಲು ಸಾಧ್ಯ ಎಂದರು.
ಸತತ ಪ್ರಯತ್ನ, ಗುರಿ ಗೆಲುವಿಗೆ ರಹದಾರಿ ಎಂದು ಹೇಳಿದ ಅವರು ಕ್ರೀಡೆಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪೂರ್ಣೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ, ತಾಲ್ಲೂಕು ಅಧ್ಯಕ್ಷ ಪ್ರವೀಣ್ ಪಿಂಟೋ, ಸೇಂಟ್ ಮೇರಿಸ್ ಶಾಲೆಯ ಮುಖ್ಯ ಶಿಕ್ಷಕ ಉತ್ತಮ್ ಟಿ.ಎಲ್, ಕೃಷ್ಣರಾಜ್ ಅರಸ್, ಶೇರ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
Chikkamagaluru ‘B’ Zone Level High School Games-2024-25