ಚಿಕ್ಕಮಗಳೂರು: ತಮ್ಮ ಇಡೀ ಬದುಕನ್ನು ಸಮರ್ಪಣೆ ಮಾಡಿಕೊಳ್ಳುವ ಶಕ್ತಿ ಇರುವವರಿಗೆ ಮಾತ್ರ ಆಶಾಕಿರಣ ಅಂಧಮಕ್ಕಳ ಶಾಲೆಯಂತಹ ಸಂಸ್ಥೆ ಕಟ್ಟಲು ಸಾಧ್ಯ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯಿಸಿದರು.
ನಗರದ ಕೆಂಪನಹಳ್ಳಿಯಲ್ಲಿರುವ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿ ನೀಡಿದ್ದ ಅವರು ಶಾಲೆಯ ಸ್ಥಿತಿಗತಿ ಪರಿಶೀಲಿಸಿ ಅಭಿವೃದ್ಧಿಗೆ ಸಹಾಯ ಹಸ್ತ ನೀಡುವ ಭರವಸೆ ನೀಡಿ ಮಾತನಾಡಿದರು. ಇಡೀ ಬದುಕನ್ನು ಸಮರ್ಪಣೆ ಮಾಡುವ ಶಕ್ತಿ ಇರುವವರು ಮಾತ್ರ ವಿಶೇಷಚೇತನರ ಅಭಿವೃದ್ಧಿ ಸಂಸ್ಥೆಗಳನ್ನು ಕಟ್ಟಬಹುದು, ಉಳಿಸಿ ಬೆಳೆಸಬಹುದು. ಇದಕ್ಕೆ ಮಾನಸಿಕವಾಗಿಯೂ ಸದೃಢರಾಗಬೇಕಾಗುತ್ತದೆ ಎಂದರು.
ಅಶಾಕಿರಣ ಸಂಸ್ಥೆಯ ಅಭಿವೃದ್ಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಯಿಂದ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.
ಆಶಾ ಕಿರಣ ಅಂಧಮಕ್ಕಳ ಶಾಲೆಯ ಸಂಸ್ಥಾಪಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಸಂಸ್ಥೆಯ ಚಟುವಟಿಕೆಗಳನ್ನು ಸಂಸದರು ಗಮನಿಸಿದ್ದಾರೆ. ಮೂರುನಾಲ್ಕು ಪ್ರಶ್ನೆಯನ್ನೂ ಕೇಳಿ ತಿಳಿದಿದ್ದಾರೆ. ಈ ಹಿಂದೆ ಶ್ರೀಕಂಠಪ್ಪ ಸಂಸದರಾಗಿದ್ದರು. ಆಗ ೧೦ ಲಕ್ಷ ರೂ ಅನುದಾನವನ್ನು ಅವರು ನೀಡಿದ್ದರು. ಅದೇ ರೀತಿ ಈಗಿನ ಸಂಸದರು ಕೈಜೋಡಿಸಿದರೆ ಆಶಾಕಿರಣ ಅಂಧಮಕ್ಕಳ ಶಾಲೆಗೆ ತುಂಬಾ ಸಹಾಯವಾಗುತ್ತದೆ ಎಂದು ಹೇಳಿದರು.
ಆಶಾಕಿರಣ ಶಾಲೆಯ ಡಾ. ಜ್ಯೋತಿಕೃಷ್ಣ, ಡಾ. ಗೌರಿವರುಣ್, ಕಾರ್ಯದರ್ಶಿ ಮಹೇಶ್, ನಝರುಲ್ಲಾ ಶರೀಫ್, ವಾಣಿ ಚಂದ್ರಯ್ಯನಾಯ್ಡು, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಮುಖಂಡರಾದ ಪುಷ್ಪರಾಜ್, ದೀಪಕ್ ದೊಡ್ಡಯ್ಯ, ಹಾಗೂ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ್, ಶಿಕ್ಷಕ ವರ್ಗ, ಸಿಬ್ಬಂದಿ ಮತ್ತತರರಿದ್ದರು.
MP Kota Srinivasa Pujari visits Ashakiran School for the Blind