ಚಿಕ್ಕಮಗಳೂರು: ಮಾನಸಿಕ ಸ್ಥಿತಿಗತಿಗಳನ್ನು ಸಮತೋಲನವಾಗಿಡಲು ಅತ್ಯವಶ್ಯಕವಾದ ಕ್ರೀಡೆಯನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಿದ್ದೇವೆಂಬ ವಿಚಾರದ ಬಗ್ಗೆ ಅವಲೋಕಿಸಬೇಕಾಗಿದ್ದು, ಕ್ರೀಡೆಗೆ ಮತ್ತು ಅದಕ್ಕಿರುವ ಮಹತ್ವವನ್ನು ಅರಿಯದೇ ಇರುವುದು ವಿಪರ್ಯಾಸದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ತಿಳಿಸಿದರು.
ಅವರು ಇಂದು ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆ, ಶ್ರೀ ಪ್ರಭುಲಿಂಗ ಸ್ವಾಮಿ ಪ್ರೌಢಶಾಲೆ, ಹಿರೇಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲ್ಲೂಕು ‘ಸಿ’ ವಲಯ ಮಟ್ಟದ ಕ್ರೀಡಾಕೂಟ ೨೦೨೪-೨೫ ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಅಷ್ಟೇ ಮಹತ್ವ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಕ್ರೀಡಾಸಕ್ತಿ-ಪ್ರೋತ್ಸಾಹ ಕಡಿಮೆಯಾಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರತಿಭಾಕಾರಂಜಿ, ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಸರ್ಕಾರ ಕೇವಲ ಐದು ಸಾವಿರ ರೂ ಅನುದಾನ ನೀಡುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು ಕ್ರೀಡಾಕೂಟಗಳಿಗೆ ಪೂರಕವಾದ ಮೂಲಕಭೂತ ಸೌಕರ್ಯಗಳನ್ನು ಕೊಡದಿದ್ದರೆ ಕ್ರೀಡಗಳನ್ನು ಪ್ರೋತ್ಸಾಹಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಸಾರ್ವತ್ರಿಕವಾಗಿ, ಸಾರ್ವಜನಿಕ ದೃಷ್ಟಿಯಿಂದ ಕೆಲಸ ಕಾರ್ಯಗಳು ಸಾರ್ವಜನಿಕರ ಪಾತ್ರ ವಹಿಸಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜವಾಬ್ದಾರಿಯಾಗಿದ್ದು, ಕಣ್ಣು ತೆರೆಸುವ ಕೆಲಸವನ್ನು ಶಾಸಕರು, ಜನಪ್ರತಿನಿಧಿಗಳು ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯಾದ್ಯಂತ ಶೇ.೫೦ ರಷ್ಟು ಶಾಲಾ-ಕಾಲೇಜುಗಳಲ್ಲಿ ಸಂಬಂಧಿಸಿದ ಶಿಕ್ಷಕರ ಕೊರತೆ ಇರುವುದರಿಂದ ಅತಿಥಿ ಉಪನ್ಯಾಸಕರಿಂದ ಪಾಠ ಪ್ರವಚನಗಳನ್ನು ಮಾಡಲಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಿದರೆ ಎನ್ಇಪಿ, ಎಸ್ಇಪಿ ಎಂದು ಹೆಸರಿಟ್ಟರೆ ಸಾಲುವುದಿಲ್ಲ, ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಯ ಅಂಶಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಅನುದಾನ ರಹಿತ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಭೋಜೇಗೌಡರು ಇದರಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂವಿಧಾನ ಬದ್ಧ ಹಕ್ಕುಗಳಾದ ಶಿಕ್ಷಣ ಮತ್ತು ಆರೋಗ್ಯವನ್ನು ಪಡೆಯಲು ಸರ್ಕಾರ ಮುಂದೆಯಾದರೂ ಈ ಬಗ್ಗೆ ಕ್ರಮ ವಹಿಸಲಿ ಎಂದು ಹೇಳಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ನಗರಸಭಾಧ್ಯಕ್ಷೆ ಸುಜಾತಶಿವಕುಮಾರ್ ಮಾತನಾಡಿ, ಕ್ರೀಡೆ ಆರೋಗ್ಯದ ಒಂದು ಭಾಗವಾಗಿದ್ದು, ಪ್ರತಿದಿನ ವ್ಯಾಯಾಮ ಮಾಡುವುದರ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಆರೋಗ್ಯ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಸೋತವರು ದೃತಿಗೆಡದೆ, ಗೆದ್ದವರು ಬೀಗದೆ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಭಾಗವಹಿಸಿದಾಗ ಮುಂದಿನ ದಿನಗಳಲ್ಲಿ ದೊಡ್ಡ ಗುರಿ ಸಾಧನೆ ಮಾಡಬಹುದಾಗಿದೆ ಎಂದರು.
ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ. ಎಸ್.ವಿನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕ್ರೀಡಾಕೂಟ ನ್ಯಾಯ, ನೀತಿ, ಧರ್ಮದಿಂದ ನಡೆಯಲಿ ಎಂದು ಆಶಿಸುತ್ತ, ಎಲ್ಲಾ ಕ್ರೀಡಾಪಟುಗಳಿಗೂ, ಶಿಕ್ಷಕರಿಗೂ ಶುಭ ಹಾರೈಸಿದರು.
ಕ್ರೀಡಾ ಜ್ಯೋತಿ ಆಗಮನವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜೇಗೌಡ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೆಚ್.ಸಿ, ಹೆಚ್.ಎಂ ನಾರಾಯಣ್, ಕೇಶವಮೂರ್ತಿ ಹೆಚ್.ಕೆ, ಮೋಹನ್ ಕುಮಾರ್, ಕೃಷ್ಣಕುಮಾರ್, ಗಂಗಾಧರ.ಹೆಚ್.ಸಿ, ಆಶಾಸುರೇಶ್, ಸುರೇಶ್, ಹೆಚ್.ಎಂ.ರಾಜ್ಕುಮಾರ್, ಶಂಕರೇಗೌಡ, ಪ್ರವೀಣ್ ಪಿಂಟೋ, ರಾಮಚಂದ್ರ, ಚಂದ್ರನಾಯಕ್, ಗಂಗಾಧರ್.ಬಿ.ವಿ, ಶಿವಕುಮಾರ್, ರವಿ.ಹೆಚ್.ಆರ್, ಪುರುಷೋತ್ತಮ್, ಯುವರಾಜ್, ಸೂರ್ಯ.ಹೆಚ್.ಸಿ, ಲಲಿತ್ಕುಮಾರ್, ಜಗದೀಶ್, ಬಿ.ಎಂ.ಆಶಾ, ಕೃಷ್ಣರಾಜ್ ಅರಸ್, ವೀರೇಶ್, ರಘುನಂದನ್, ಮಂಜುನಾಥ್, ಎಂ.ವಿಜಿಕುಮಾರ್, ಪ್ರಮೋದ್, ಹೆಚ್.ಎಸ್.ಅಶೋಕ್ ಕುಮಾರ್, ನಂಜುಡಯ್ಯ, ಉಮೇಶ್, ದಿನೇಶ್, ವಸಂತ್ ಕುಮಾರ್, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ನಾಗರಾಜ್ ಸ್ವಾಗತಿಸಿ, ಕೊನೆಯಲ್ಲಿ ವಂಧಿಸಿದರು. ಮುಖ್ಯ ಶಿಕ್ಷಕ ನರಸಿಂಹಮೂರ್ತಿ ನಿರೂಪಿಸಿದರು.
Chikmagalur Taluk ‘C’ Zone Level Sports Event