ಶಾಲಾ ಕಾಲೇಜುಗಳಲ್ಲೂ ಜಾನಪದ ವಿಭಾಗವನ್ನು ತೆರೆಯಬೇಕು
ಚಿಕ್ಕಮಗಳೂರು: ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿರುವ ಇಂದಿನ ಪೀಳಿಗೆಯನ್ನು ಅದರಿಂದ ಹೊರ ತಂದು ಅವರಿಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕಾದರೆ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಜಾನಪದ ವಿಭಾಗವನ್ನು ತೆರೆಯಬೇಕು ಎಂದು ನಾಡಿನ ಖ್ಯಾತ ಗಾಯಕ ಡಾ, ಅಪ್ಪಗೆರೆ ತಿಮ್ಮರಾಜು ಸಲಹೆ ಮಾಡಿದರು.
ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ, ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ನಗರದ ಬಿಜಿಎಸ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಗೀತೆಗಳ ಗಾಯನ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿರುವ ನಾವು ನಮ್ಮ ಹಿರಿಯರು ಕಟ್ಟಿಕೊಟ್ಟಿರುವ ಜಾನಪದವನ್ನು ಮರೆತಿದ್ದೇವೆ, ಅದರ ಪರಿಣಾಮ ನಾವು ಮಹಾ ಜ್ಞಾನಿಗಳು, ಶಿಕ್ಷಣವಂತರು, ಎಲ್ಲವನ್ನೂ ತಿಳಿದವರು ಎನ್ನುವ ರೀತಿ ವರ್ತಿಸುತ್ತಿದ್ದೇವೆ, ಆದರೆ ನಮ್ಮೊಳಗಿನ ಭಾವನೆಗಳನ್ನು ಕಳೆದುಕೊಂಡು ಪ್ರೀತಿ, ವಿಶ್ವಾಸ, ಸ್ನೇಹ, ಬಾಂಧವ್ಯ ಮತ್ತು ಭಾವನೆಗಳಿಲ್ಲದೇ ಬರಡಾಗಿ ಬದುಕುತ್ತಿದ್ದೇವೆ ಎಂದು ವಿಷಾದಿಸಿದರು.
ಭಾಷಣಗಳಿಂದ, ಜಾನಪದ ಹಬ್ಬ, ಜಾನಪದ ದಿನಾಚರಣೆಗಳಿಂದ, ಜಾನಪದ ಉಳಿಯುವುದಿಲ್ಲ, ಅದು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನಾಡಿನೆಲ್ಲಡೆ ಇರುವ ಜಾನಪದ ಕಲೆಗಳನ್ನು ಪಠ್ಯಪುಸ್ತಕಕ್ಕೆ ಅಳವಡಿಸಬೇಕು, ಎಲ್ಲಾ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಜಾನಪದವನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಕಲಿಸಬೇಕು ರಾಜ್ಯದ ಬಹುತೇಕ ಕಡೆ ಇರುವ ರಂಗಾಯಣದಂತೆ ಜಾನಪದ ರಂಗಾಯಣವನ್ನೂ ಸ್ಥಾಪಿಸಬೇಕು ಹಾಗಾದಾಗ ಮಾತ್ರ ಜಾನಪದ, ನಮ್ಮ ಶ್ರೀಮಂತ ಸಂಸ್ಕೃತಿ, ಭವ್ಯ ಪರಂಪರೆ ಉಳಿಯುತ್ತವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಜಾನಪದ ಈ ನೆಲದ ಸಂಸ್ಕೃತಿ, ನಮ್ಮ ಬದುಕಿನ ಅವಿಭಾಜ್ಯ ಅಂಗ ಅದನ್ನು ನಾವು ಕಳೆದುಕೊಂಡರೆ ಜಗತ್ತಿನೆದುರು ನಮ್ಮತನವನ್ನು ಕಳೆದುಕೊಂಡು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗಾಯಕ, ಮಲ್ಲಿಗೆ ಸುಧೀರ್ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಾನಪದದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಅಡಗಿದೆ ಹಾಗಾಗಿ ವಿದ್ಯಾರ್ಥಿಗಳು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜೆ, ಜಿ, ಸುರೇಂದ್ರ ವಿದ್ಯಾರ್ಥಿಗಳಿಗೆ ಜಾನಪದ ತರಬೇತಿ ನೀಡಿದ ಗಾಯಕರಾದ ಡಾ ಅಪ್ಪಗೆರೆ ತಿಮ್ಮರಾಜು ಮತ್ತು ಮಲ್ಲಿಗೆ ಸುಧೀರ್ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ಇದೇ ವೇಳೆ ಅಪ್ಪಗೆರೆ ತಿಮ್ಮರಾಜು, ಮಲ್ಲಿಗೆ ಸುಧೀರ್ ತಂಡದಿಂದ ನಡೆದ ಗಾಯನ ಕಾಲೇಜಿನಲ್ಲಿ ಜಾನಪದ ಲೋಕವನ್ನೇ ಅನಾವರಣಗೊಳಿಸಿತು ವಿದ್ಯಾರ್ಥಿಗಳು ಮೋಡಿಗೊಳಗಾದವರಂತೆ ಇಬ್ಬರೂ ಗಾಯಕರ ಹಾಡಿಗೆ ಒಕ್ಕೊರಲ ದನಿಗೂಡಿಸಿ ಕುಣಿದು ಕುಪ್ಪಳಿಸಿದರು.
ಪ್ರತಿ ಹಾಡು ಮುಗಿಯುತ್ತಿದ್ದಂತೆ ವಿದ್ಯಾರ್ಥಿ ಸಮೂಹದಿಂದ ಒನ್ಸ್ ಮೋರ್ ಬೇಡಿಕೆ ಮುಗಿಲು ಮುಟ್ಟುತ್ತಿತ್ತು, ಕಾಲೇಜಿನ ಅವಧಿ ಮುಗಿದು ಗಂಟೆಗಳು ಕಳೆದರೂ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಅಲುಗಾಡದೇ ಜಾನಪದದ ಸೊಗಡನ್ನು ಆಸ್ವಾದಿಸಿದರು.
ಗಾಯಕರಾದ ಅಭಿಷೇಕ್, ಮಂಜುಳಾ ಗಾಯನದಲ್ಲಿ ಪಾಲ್ಗೊಂಡು ಸಭೆಯಲ್ಲಿ ಸಂಚಲನ ಮೂಡಿಸಿದರು, ಬಿಜಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ, ಆರ್, ಚಂದ್ರಶೇಖರ್, ಸಂಗೀತ ಶಿಕ್ಷಕಿ ಸುಮಾಪ್ರಸಾದ್, ನೃತ್ಯ ಶಿಕ್ಷಕಿ ವೀಣಾ ಅರವಿಂದ್, ಶಿಕ್ಷಕಿ ಅನಿತಾ, ವಿದ್ಯಾರ್ಥಿಗಳಾದ ತೃಪ್ತಿ, ಪುಣ್ಯ, ಯಶಸ್ವಿನಿ ಉಪಸ್ಥಿತರಿದ್ದರು.
Folk song vocal training worker