ತರೀಕೆರೆ: ನಗರ ಪ್ರದೇಶದ ಮಕ್ಕಳಿಗೆ ಭವಿಷ್ಯದ ಬಗ್ಗೆ ಸ್ವಲ್ಪ ಮಟ್ಟಿನ ಕಾಳಜಿ ಇದ್ದರೆ, ಗ್ರಾಮೀಣ ಮತ್ತು ಬಡ ಮಕ್ಕಳಲ್ಲಿ ಭವಿಷ್ಯದ ಅರಿವಿರುವುದಿಲ್ಲ. ಈ ಬಗ್ಗೆ ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಆ ಮಗುವಿನಲ್ಲಿ ಯಾವ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇದೆ ಎಂಬುವುವುದನ್ನು ಗಮನಿಸಿ, ಆ ಮಕ್ಕಳಿಗೆ ಆಯಾ ಕ್ಷೇತ್ರದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಅವರ ಭವಿಷ್ಯವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಅವರು ಪಟ್ಣಣದ ಶ್ರೀ ಗುರುರೇವಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪುರಸಭೆ, ತರೀಕೆರೆ, ಪಟ್ಟಣ ಪಂಚಾಯಿತಿ, ಅಜ್ಜಂಪುರ, ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಆದ್ದರಿಂದ 1 ರಿಂದ 5ನೇ ತರಗತಿಯ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರು ಹೆಚ್ಚಿನ ಒತ್ತು ನೀಡಿ ಶ್ರಮಿಸಿದರೆ ಆ ಮಕ್ಕಳ ಭವಿಷ್ಯ ಬದಲಾವಣೆಯಾಗಿ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಹೆಚ್ಚಾಗುತ್ತದೆ ಎಂದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪಲಿತಾಂಶವು ರಾಜ್ಯದಲ್ಲಿ ನಮ್ಮ ಜಿಲ್ಲೆ 17ನೇ ಸ್ಥಾನದಿಂದ 10ನೇ ದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಕರ ಪ್ರಯತ್ನ ಶ್ರಮದಿಂದ ನಮ್ಮ ಜಿಲ್ಲೆಯೂ ಸಹ ಮೊದಲನೇ ಸ್ಥಾನಕ್ಕೇರಲಿ ಎಂದು ಹೇಳಿದರು.
ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಪ್ರತಿಯೊಬ್ಬ ವ್ಯಕ್ತಿ ಯಾವುದಾದರೂ ಉನ್ನತ ಸ್ಥಾನದಲ್ಲಿದ್ದರೆ ಅದು ಗುರುವಿನ ಶಿಕ್ಷೆ ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ಹೇಳಿದರು.
ಪ್ರಧಾನ ಉಪನ್ಯಾಸ ನೀಡಿದ ಮೈಸೂರಿನ ಖ್ಯಾತ ಕನ್ನಡ ವಿದ್ವಾಂಸ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿ ಶಿಕ್ಷಕರು ತಮ್ಮ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಶಿಕ್ಷಕರಿಲ್ಲದ ಶಾಲೆಗಳು ಪ್ರಾರಂಭವಾಗುವುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ ನಾವು ನಮ್ಮ ನಡವಳಿಕೆ, ಜ್ಞಾನ ಮತ್ತು ಆದರ್ಶಗಳನ್ನು ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಾಥಮಿಕ ಹಂತದ ಮಕ್ಕಳ ಹೃದಯದಲ್ಲಿ ಶಿಕ್ಷಕರಿರುತ್ತಾರೆ. ಹೃದಯದೊಳಗಿರುವ ನಾವು ಸಹಾನೂಭೂತಿ, ಕರುಣೆ, ಪ್ರೀತಿ, ಶುದ್ಧ ಮತ್ತು ಸ್ವಚ್ಛವಾಗಿರಬೇಕು. ಆದರ್ಶ ಬದುಕಿನ ಬಗ್ಗೆ ಮಾತನಾಡಬೇಕು. ಶಾಲಾ ಕೊಠಡಿಯೊಳಗೆ ಶಿಕ್ಷಕರು ತಾಯಂದಿರರಾಗಿರಬೇಕು. ಮಕ್ಕಳಿಗೆ ಅಂಕಗಳ ಜೊತೆಗೆ ಜೀನವದ ನೈತಿಕ ಪಾಠವನ್ನು ಕಲಿಸಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಮಾನವನ ಪರಿವರ್ತನೆಯ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣಕ್ಕಾಗಿ ಡಾ. ಅಂಬೇಡ್ಕರ್ ಕಠಿಣ ಪರಿಶ್ರಮ ಪಟ್ಟರು. ನಂತರ ಸಂವಿಧಾನದಲ್ಲಿ ಇವರು ಶಿಕ್ಷಣ ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿದರು. ಪುಟ್ಟ ಮಕ್ಕಳ ಮನಸ್ಸು ಪರಿಶುದ್ಧವಾಗಿರುತ್ತದೆ. ಒಂದು ಕಲ್ಲನ್ನು ಶಿಲ್ಪಿ ಕೆತ್ತನೆ ಮಾಡಿ ಮೂರ್ತಿ ಮಾಡಿದಂತೆ, ಈ ಹಂತದಲ್ಲಿಯೇ ಉತ್ತಮ ಸಂಸ್ಕಾರಗಳನ್ನು ನೀಡಿ ಉತ್ತಮ ಸತ್ಪ್ರಜೆಗಳನ್ನಾಗಿ ಮಾಡುವುದು ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಿ ಮಕ್ಕಳ ವಿದ್ಯಾಭ್ಯಾದ ಕಡೆ ಹೆಚ್ಚಿನ ಗಮನಕೊಡಿ. ಕೆಲವು ಮಕ್ಕಳು ಶಿಕ್ಷಕಣದಲ್ಲಿ ಹಿಂದಿರುವುದನ್ನು ಗಮನಿಸಿ ಅಂತಹವರ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.
ಪುರಸಭಾಧ್ಯಕ್ಷ ವಸಂತಕುಮಾರ್, ಉಪಾದ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮಾ, ಡಿಡಿಪಿಐ ಪುಟ್ಟರಾಜ್ ಜಿ.ಕೆ., ಬಿ.ಇ.ಓ. ಗೋವಿಂದಪ್ಪ ಟಿ., ಮುಖ್ಯಾಧಿಕಾರಿ ಪ್ರಶಾಂತ್ ಮಾತನಾಡಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಸರ್ಕಾರ ಸ್ಪಲ್ಪಮಟ್ಟಿನ ಆರ್ಥಿಕ ಸಂಕಷ್ಟದಲ್ಲಿದ್ದರೂ 7ನೇ ವೇತನ ಜಾರಿಗೊಳಿಸಿ ನೌಕರರಿಗೆ ಸ್ಪಂದಿಸಿದೆ.
District Level Teacher’s Day Celebration