ಚಿಕ್ಕಮಗಳೂರು: ಪಕ್ಷನಿಷ್ಠೆಯಿಂದ ಕೆಲಸ ಮಾಡಿದರೆ ಅವಕಾಶಗಳು ತಾವಾಗೇ ಲಭ್ಯವಾಗುತ್ತವೆ-ಬಿ.ಎಂ ಸಂದೀಪ್ಸಾಮಾಜಿಕ ನ್ಯಾಯ-ಸಂವಿಧಾನದ ಆಶಯಗಳ ಪರವಾಗಿದ್ದು, ಧ್ವನಿ ಇಲ್ಲದ ಜನರ ಸೇವೆ ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಉದ್ದೇಶವಾಗಿದ್ದು, ಈ ರೀತಿ ಪೂರಕವಾಗಿ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ತಿಳಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಮೂರನೇ ಬಾರಿಗೆ ಎಐಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ತಮಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯುವಕರಿಗೆ ಹೆಚ್ಚು ಅಧಿಕಾರ ನೀಡಲು ರಾಹುಲ್ ಗಾಂಧಿಯವರು ಮುಂದಾಗಿದ್ದಾರೆ, ಸಮಾಜದ ಎಲ್ಲಾ ವರ್ಗದ ಜನರನ್ನು ನೇರ ಸಂಪರ್ಕಿಸಬೇಕೆಂಬ ಉದ್ದೇಶದಿಂದ ಭಾರತ್ ಜೋಡೋ ಪಾದಯಾತ್ರೆ ಮಾಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಂದು ಶ್ಲಾಘಿಸಿದರು.
ಹಿಂದೆ ನಗರ ಯುವ ಕಾಂಗ್ರೆಸ್ಗೆ ಆಯ್ಕೆಯಾದ ನನ್ನನ್ನು ಪಕ್ಷದ ಹಿರಿಯ ಮುಖಂಡರು ಸೇರಿ ಅವರೆಲ್ಲರ ಸಹಕಾರದಿಂದ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದೆ. ಪ್ರಸ್ತುತ ಯುವಕರು ಹೆಚ್ಚಾಗಿ ಸೇರುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ಬಂದಿದೆ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದು ಮುಂದೆ ಚುನಾವಣೆ ನಡೆಯುತ್ತಿರುವ ರಾಜ್ಯದ ಉಸ್ತುವಾರಿಯನ್ನು ನೀಡಿದ್ದಾರೆ, ಅನುಭವದ ಜೊತೆಗೆ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಗುರಿ ಹೊಂದಿದ್ದೇನೆಂದು ತಿಳಿಸಿದರು.
ಪಕ್ಷನಿಷ್ಠೆಯಿಂದ ಕೆಲಸ ಮಾಡಿದರೆ ಅವಕಾಶಗಳು ತಾವಾಗೇ ಲಭ್ಯವಾಗುತ್ತವೆ ಎನ್ನುವುದಕ್ಕೆ ನಾನು ಸ್ಪಷ್ಟ ಉದಾಹರಣೆ. ಕಾಂಗ್ರೆಸ್ ಪಕ್ಷದ ಸಂವಿಧಾನವೇ ಭಾರತದ ಸಂವಿಧಾನ ಒಂದೇ ಆಗಿದ್ದು, ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತದ ಜೊತೆಗೆ ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್, ನೆಹರು, ಕುವೆಂಪುರವರು ಹೇಳಿದಂತೆ ಕಾಂಗ್ರೆಸ್ ಪಕ್ಷ ಜಾತಿ ಜನಾಂಗದ ವ್ಯತ್ಯಾಸವಿಲ್ಲದೆ ಸಮನಾಗಿ ಕಾಣುತ್ತಿದೆ ಎಂದರು.
ಮೂರನೇ ಬಾರಿಗೆ ತಮ್ಮನ್ನು ಆಯ್ಕೆಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಧಿ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಎಲ್ಲಾ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಸರಿಯಾಗಿ, ಸಮರ್ಪಕವಾಗಿ ನಿಭಾಯಿಸಿದಾಗ ಪಕ್ಷ ನಮ್ಮನ್ನು ಗುರ್ತಿಸುತ್ತದೆ, ಕಳೆದ ಚುನಾವಣೆ ಸಂದರ್ಭದಲ್ಲಿ ನನಗೆ ಹಾಸನ-ಶಿವಮೊಗ್ಗ ಜಿಲ್ಲೆ ಉಸ್ತುವಾರಿ ನೀಡಿದ್ದು ಸಮರ್ಪಕವಾಗಿ ನಿಭಾಯಿಸಿದ್ದರಿಂದ ರಾಹುಲ್ ಗಾಂಧಿಯವರ ಮತ ಪ್ರಚಾರ ಸಭೆ ಯಶಸ್ವಿಯಾಯಿತು ಎಂದು ಹೇಳಿದರು.
ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರಿಶ್ರಮದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು, ರಾಜಕೀಯ ಬೇಡ ಎಂದು ತೀರ್ಮಾನಿಸಿದ್ದ ನನಗೆ ಕಾಂಗ್ರೆಸ್ ಪಕ್ಷ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಟಿಕೆಟ್ ನೀಡಿ ಗೆದ್ದು ಅಧ್ಯಕ್ಷರೂ ಆಗಿದ್ದೆ ಎಂದು ವಿವರಿಸಿದರು.
ಪಕ್ಷದಲ್ಲಿ ಕೆ.ಎಸ್ ಶಾಂತೇಗೌಡರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದನ್ನು ಗುರ್ತಿಸಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದರು. ಅದೇ ರೀತಿ ನಗರಸಭೆ ಸದಸ್ಯರಾಗಿದ್ದ ಬಿ.ಎಂ ಸಂದೀಪ್ರವರನ್ನು ಗುರ್ತಿಸಿದ್ದಾರೆ. ಪಕ್ಷ ಯಾರನ್ನೂ ಕೈಬಿಡುವುದಿಲ್ಲ ಎಂಬುದಕ್ಕೆ ಸಂದೀಪ್ ಉದಾಹರಣೆಯಾಗಿದ್ದು, ಕಾಂಗ್ರೆಸ್ ಪಕ್ಷ ನನಗೆ ರಾಜಕೀಯ ನೆಲೆ ನೀಡಿದೆ ಎಂದು ಶ್ಲಾಘಿಸಿದರು.
ಇನ್ನಷ್ಟು ಉತ್ತಮ ಸೇವೆ ಸಲ್ಲಿಸುವ ಮೂಲಕ ಬಿ.ಎಂ ಸಂದೀಪ್ರವರಿಗೆ ಮುಂದಿನ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲಿ ಎಂದು ಹಾರೈಸಿದ ಅವರು ಪಕ್ಷದಲ್ಲಿ ಯುವಕರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್ ವಿಜಯಕುಮಾರ್ ಮಾತನಾಡಿ, ೨೧ ರಾಜ್ಯಗಳಲ್ಲಿ ಬಿ.ಎಂ ಸಂದೀಪ್ ಉತ್ತಮ ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಮೂರನೇ ಬಾರಿಗೆ ಕೆಲಸ ಮಾಡಲು ಎಐಸಿಸಿ ಅವಕಾಶ ಕಲ್ಪಿಸಿದೆ. ಪರಿಶ್ರಮ, ಶ್ರದ್ಧೆ, ಪಕ್ಷ ಸಂಘಟನೆಗೆ ನೀಡಿದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ, ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದರೆ ಕಾಂಗ್ರೆಸ್ ಪಕ್ಷ ಗುರ್ತಿಸುತ್ತದೆ ಎಂಬುದಕ್ಕೆ ಬಿ.ಎಂ ಸಂದೀಪ್ ಸಾಕ್ಷಿಯಾಗಿದ್ದಾರೆ. ಅವರು ತಮ್ಮ ಕುಟುಂಬದವರನ್ನು ಬಿಟ್ಟು ದೇಶದ ನಾನಾ ರಾಜ್ಯಗಳನ್ನು ಸುತ್ತಿ ಪಕ್ಷ ಸಂಘಟನೆಗೆ ಶ್ರಮಿಸಿದ ಜಿಲ್ಲೆಯ ಏಕೈಕ ನಾಯಕ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ, ನಗರಾಧ್ಯಕ್ಷ ತನೂಜ್ ಕುಮಾರ್, ಮುಖಂಡರಾದ ಮಲ್ಲೇಶ್ ಸ್ವಾಮಿ, ಪ್ರಕಾಶ್ ರೈ, ಲಕ್ಷ್ಮಣ, ಮಧು ಸಿ.ಸಿ, ಅನೀಲ್, ಬೆಟ್ಟಗೆರೆ ಪ್ರವೀಣ್, ಖಲಂದರ್, ಪರಮೇಶ್, ಶಾದಬ್ ಅಲಂಖಾನ್, ಶಿವಾನಂದ್, ನಾಗಭೂಷಣ್, ಪ್ರಕಾಶ್, ಮತ್ತಿತರರು ಭಾಗವಹಿಸಿದ್ದರು.
A felicitation ceremony organized by the Congress