ಚಿಕ್ಕಮಗಳೂರು: ನಗರದ ಸಾರ್ವಜನಿಕ ಗಣಪತಿ ಸೇವಾ ಸಮಿತಿ (ಆಜಾದ್ ಮೈದಾನ) 88 ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬಂದಿದೆ. 1936ರಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗಣೇಶ ಉತ್ಸವ ನಡೆಸಿಕೊಂಡು ಬರಲಾಗಿದೆ. ಅಂದು ಆರಂಭವಾದ ಸಾರ್ವಜನಿಕ ಗಣಪತಿ ಸೇವಾ ಸಮಿತಿ ಈಗ ತನ್ನದೇ ಆದ ಸ್ವಂತ ಕಟ್ಟಡ, ಟ್ರಸ್ಟ್ಗಳನ್ನು ಹೊಂದಿದೆ. ಪ್ರತಿವರ್ಷ ಉತ್ಸವವನ್ನು ವೈಭವದಿಂದ ನಡೆಸುತ್ತಿದೆ.
ಮೊದಲಿಗೆ ನೆಹರೂ ರಸ್ತೆಯಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಬಳಿಕ ಮಹಿಳಾ ಸಮಾಜ, ನಂತರ ಶೆಟ್ಟರ್ ಬೀದಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆಜಾದ್ ಪಾರ್ಕ್ನಲ್ಲಿ ಹಲವು ವರ್ಷ ಪ್ರತಿಷ್ಠಾಪಿಸಿ ಉತ್ಸವ ನಡೆಸಲಾಗುತ್ತಿತ್ತು. ಜಿಲ್ಲಾಡಳಿತದ ಸಲಹೆ ಮೇರೆಗೆ ಈಗ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಕುಬೇರಪ್ಪ ಹೇಳಿದರು.
‘1984ರಿಂದ ನಾನು ಸೇವಾ ಸಮಿತಿಯಲ್ಲಿದ್ದೇನೆ. ಅಣ್ಣಪ್ಪಶೆಟ್ಟಿ, ಸಿ.ಆರ್.ಶಿವಾನಂದ, ಇ.ಎಂ.ಎಸ್.ಶಾಸ್ತ್ರಿ, ಭರತ್, ಶ್ರೀನಿವಾಸ ನಾಯ್ಡು, ನಂಜರಾಜ್, ಎಲ್.ಶಿವಮೂರ್ತಿ, ವಿರೂಪಾಕ್ಷಪ್ಪ, ಎಲ್.ವಿ.ಬಸವರಾಜ್, ಈಶ್ವರಪ್ಪ ಕೋಟೆ, ಏಕಾಂತರಾಮ್, ವರಸಿದ್ಧಿ ವೇಣುಗೋಪಾಲ್ ಅವರು ಅಧ್ಯಕ್ಷರಾಗಿದ್ದರು. ಈಗ ನಾನು ಅಧ್ಯಕ್ಷನಾಗಿದ್ದೇನೆ’ ಎಂದರು.
ಆಜಾದ್ ಪಾರ್ಕ್ನಲ್ಲಿದ್ದಾಗ ರಸ್ತೆಯಲ್ಲಿ ಹೋಗುವ ಜನರು ಬರುತ್ತಿದ್ದರು. ಬೋಳರಾಮೇಶ್ವರ ದೇಗುಲದ ಆವರಣಕ್ಕೆ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ ಎಂದು ಹೇಳಿದರು.
‘ಭಕ್ತರಿಂದ ಸಂಗ್ರಹವಾದ ಹಣದಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಉಳಿದ ಹಣದಲ್ಲಿ ಹನುಮಂತಪ್ಪ ವೃತ್ತದಲ್ಲಿ ಕಟ್ಟಡ ನಿರ್ಮಿಸಿದ್ದೇವೆ. ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ಮಾಡಲಾಗಿದೆ. ಕಟ್ಟಡದ ಬಾಡಿಗೆ ಹಣವನ್ನು ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ಸವಕ್ಕೆ ಭಕ್ತರಿಂದ ಹಣ ಸಂಗ್ರಹವಾಗದಿದ್ದರೆ ಟ್ರಸ್ಟ್ ಹಣದಲ್ಲೇ ಉತ್ಸವ ನಡೆಸಲು ಸಾಧ್ಯವಿದೆ’ ಎಂದರು.
ಸದ್ಯಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಇದೆ. 700–800 ಪೂಜಾ ಸೇವಾರ್ಥದಾರಿದ್ದಾರೆ. ಅನ್ನಸಂತರ್ಪಣೆ, ಸತ್ಯನಾರಾಯಣ ಪೂಜೆ, ಸಂಕಷ್ಟ ಪೂಜೆಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
Ganeshotsava celebration by Public Ganpati (Azad Maidan) Seva Samiti