ಚಿಕ್ಕಮಗಳೂರು: ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ವೈಯಕ್ತಿಕ ಹಕ್ಕಾಗಿರುವ ಶಿಕ್ಷಣವು ವ್ಯಕ್ತಿಯ ಬೆಳವಣಿಗೆಗೆ ತುಂಬಾ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ಲೋಕ ಶಿಕ್ಷಣ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ, ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಪಾತ್ರ ಬಹಳ ಮುಖ್ಯವಾದದ್ದು, ದೇಶದ ನಾಗರೀಕರಣ ಹೆಚ್ಚು ಸಾಕ್ಷರತಾರಾಗಿದ್ದರೆ ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಣದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷರತೆಯ ಮಹತ್ವದ ಬಗ್ಗೆ ಅನಕ್ಷರಸ್ಥರಲ್ಲಿ ಅರಿವು ಮೂಡಿಸಿ ಅವರನ್ನು ಸಾಕ್ಷರತಾರನ್ನಾಗಿ ಮಾಡಬೇಕು ಎಂದು ಹೇಳಿದರು.
ಯುನೆಸ್ಕೋ ಮೊದಲ ಬಾರಿಗೆ ನವೆಂಬರ್ ೭, ೧೯೬೫ ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಆಚರಿಸ ಬೇಕೆಂದು ನಿರ್ಧರಿಸಿತು. ಪ್ರಪಂಚದಿಂದ ಅನಕ್ಷರತೆಯ ಕುರುಹುಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ ೨೬, ೧೯೬೬ ರಂದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ತನ್ನ ೧೪ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೮ ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುವುದೆಂದು ಘೋಷಿಸಿತು. ಸೆಪ್ಟೆಂಬರ್ ೦೬, ೧೯೬೬ ರಂದು ವಿಶ್ವವು ಮೊದಲ ಬಾರಿಗೆ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು ಎಂದರು.
ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇರುವ ಗ್ರಾಮೀಣ ಹಾಗೂ ನಗರ ಭಾಗದ ೧೫ ರಿಂದ ೬೦ ವರ್ಷದೊಳಗಿನ ವಯೋಮಾನದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಎಲ್ಲಾ ವರ್ಗದ ಅನಕ್ಷರಸ್ಥರನ್ನು ಸಮೀಕ್ಷೆಯ ಮೂಲಕ ಗುರುತಿಸಿ ಅವರಿಗೆ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸುವುದು ಪ್ರಮುಖ ಉದ್ದೇಶವಾಗಿದೆ, ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಮಹಿಳೆ ಹಾಗೂ ಪುರುಷರಿಗೆ ಸಾಮಾನ್ಯ ಓದು, ಬರಹ, ಲೆಕ್ಕಚಾರ ಕಲಿಸುವುದರ ಮೂಲಕ ಅಕ್ಷರಸ್ಥರಾಗಿ ಮಾಡಬೇಕು ಎಂದು ಹೇಳಿದರು.
ಸರ್ಕಾರವು ಕೇಂದ್ರ್ರ ಪುರಸ್ಕೃತ ಯೋಜನೆಗಳಾದ ಸಾಕ್ಷರ ಸನ್ಮಾನ, ಕಲಿಕೆ ಗಳಿಕೆ, ಕನ್ನಡನಾಡು ಸಾಕ್ಷರ ನಾಡು, ಮುಂದೂವರಿಕೆ ಶಿಕ್ಷಣ, ಸಮಾನ ಶಿಕ್ಷಣ, ಸಾಕ್ಷರತಾ ಭಾರತ್ ಹೀಗೆ ಹಲವಾರು ಯೋಜನೆಗಳ ಮೂಲಕ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸಿದೆ. ಈ ನವ ಸಾಕ್ಷರರಿಗೆ ಸಾಕ್ಷರತಾ ಶಿಬಿರವನ್ನು ಏರ್ಪಡಿಸಿ ಅವರ ಜೀವನ ಗುಣಮಟ್ಟವನ್ನು ಸುಧಾರಿಸಲು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವುದೇ ಧ್ಯೇಯವಾಗಿದೆ ಎಂದ ಅವರು ಪ್ರತಿಯೊಬ್ಬರು ಅಕ್ಷರ ಕಲಿತು ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಮಾತನಾಡಿ ಪ್ರತಿಯೊಬ್ಬ ಅಕ್ಷರಸ್ಥ ಯುವ ಜನತೆಯು ತಮ್ಮ ಸುತ್ತಮುತ್ತ ಪ್ರದೇಶದಲ್ಲಿನ ಅನಕ್ಷರಸ್ಥರಿಗೆ ಪ್ರಾಥಮಿಕ ಅಕ್ಷರ ಜ್ಞಾನ ಹಾಗೂ ಲೆಕ್ಕಚಾರಗಳ ಅರಿವು ಮೂಡಿಸಿ ಅಕ್ಷರಸ್ಥರನ್ನಾಗಿ ಮಾಡಬೇಕು. ನಾಮಫಲಕಗಳನ್ನು ಓದುವುದು ತಮ್ಮ ಹೆಸರನ್ನು ಸಹಿ ಹಾಕುವುದು ಇತರರೊಂದಿಗೆ ವ್ಯವಹಾರಿಕವಾಗಿ ತೊಡಗಿಕೊಳ್ಳಲು ಜ್ಞಾನ ಹೊಂದುವಂತೆ ಮಾಡಬೇಕು ಅಕ್ಷರಸ್ಥರಾಗುವುದರಿಂದ ಇತರರಿಂದ ಮೋಸ ಹೋಗುವುದನ್ನು ತಡೆಗಟ್ಟಬಹುದು ಎಂದ ಅವರು ತಾವು ಕಲಿತು ಇತರರಿಗೆ ಕಲಿಸಿ ಅಕ್ಷರಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಚೋಪ್ದಾರ್, ಜಿಲ್ಲಾ ವಯಸ್ಕ ಶಿಕ್ಷಣ ಸಹಾಯಕ ಕೆ.ಎಂ. ಲೋಕೇಶ್, ಜಿಲ್ಲಾ ಶಿಕ್ಷಣಾಧಿಕಾರಿ ನಾಗರಾಜ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.
International Literacy Day and Week Programme