ಚಿಕ್ಕಮಗಳೂರು: ರಾಹುಲ್ಗಾಂಧಿ ಮೀಸಲಾತಿ ರದ್ಧತಿ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ತಿಳಿಸಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬುಧವಾರ ನಡೆದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಮೇರಿಕಾದಲ್ಲಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಅಮೇರಿಕಾದಲ್ಲಿ ನಮ್ಮ ದೇಶದ ಚುನಾವಣಾ ವ್ಯವಸ್ಥೆ ಸರಿಯಾಗಿಲ್ಲ. ನಿರುದ್ಯೋಗ ಸಮಸ್ಯೆ ಮತ್ತು ಭ್ರಷ್ಟಾಚಾರ ಹೆಚ್ಚಿದೆ ಎಂದು ದೇಶದ ಗೌರವಕ್ಕೆ ದಕ್ಕೆ ತರುವಂತ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶೋಷಿತರಿಗೆ ನೀಡುತ್ತಿರುವ ಮೀಸಲಾತಿಯನ್ನು ರದ್ದೂಗೊಳಿಸುವ ಹೇಳಿಕೆ ನೀಡುವ ಮೂಲಕ ಆ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ದಲಿತ, ಶೋಷಿತ ವರ್ಗದ ವಿರೋಧಿ ಎಂಬುದು ಅವರ ಹೇಳಿಕೆಯಿಂದ ಸಾಬೀತಾಗಿದೆ. ಅವರ ಪಕ್ಷ ಪಶ್ಚತ್ತಾಪದ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ ಅವರು, ನಾಳೆಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಕಟಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಎಸೈಟಿ ಮೂಲಕ ಮುಚ್ಚಿ ಹಾಕುವ ಯತ್ನವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈಡಿ ತನಿಖೆಯಿಂದ ಸತ್ಯಸಂಗತಿ ಬಯಲಾಗಿದೆ. ನಿಗಮದ ಅಧ್ಯಕ್ಷ ನಾಗೇಂದ್ರ ಅವರು ಎ-೧ ಆರೋಪಿಯಾಗಿದ್ದಾರೆ. ಈ ಹಗರಣದ ಸಂಪೂರ್ಣ ಹೊಣೆಗಾರಿಕೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕು ರಂದು ಒತ್ತಾಯಿಸಿದರು.
ಕಾಂಗ್ರೆಸ್ ಮೀಸಲಾತಿ ವಿರೋಧಿ ಎಂಬ ವಿಷಯವನ್ನು ಇಟ್ಟುಕೊಂಡು ನಾಳೆಯಿಂದ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಲು ಕರೆ ಕೊಡಲಾಗಿದೆ ಎಂದು ಹೇಳಿದರು. ರಾಹುಲ್ ಗಾಂಧಿಯವರು ಅಮೆರಿಕದಿಂದ ವಾಪಸ್ ಬರುವುದರ ಒಳಗೆ ಕಾಂಗ್ರೆಸ್ ಇದಕ್ಕೆ ಪಶ್ಚಾತ್ತಾಪದ ಹೇಳಿಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮೀಸಲಾತಿಗೆ ಸಂಬಂಧಿಸಿ ಕೇವಲ ಮೊಸಳೆಕಣ್ಣೀರನ್ನು ಇಲ್ಲಿನವರೆಗೆ ಕಾಂಗ್ರೆಸ್ ಸುರಿಸಿದೆ. ಸಂವಿಧಾನದ ಕುರಿತು ಕಾಂಗ್ರೆಸ್ ಕೇವಲ ಭಾಷಣ ಮಾಡಿದೆ. ಕೈನಲ್ಲಿ ಸಂವಿಧಾನದ ಪುಸ್ತಕ ಮಾತ್ರ ಹಿಡಿದುಕೊಂಡಿದ್ದರು. ಆದರೆ, ಮನಸ್ಸಿನಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯನ್ನೇ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸಭೆ ಅಧ್ಯಕ್ಷತೆ ವಹಿಸಿದ್ಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ ಸದಸ್ಯತ್ವ ಅಭಿಯಾನ ಕುರಿತು ಮಾತನಾಡಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ರವೀಂದ್ರ ಬೆಳವಾಡಿ, ಪುಣ್ಯಪಾಲ್ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಧುಕುಮಾರ್ ರಾಜ ಅರಸ್ ನಿರೂಪಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಸ್ವಾಗತಿಸಿದರು
Protests across the state condemning Rahul Gandhi’s statement