ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿವಿಧ ಮುಖಂಡರುಗಳೊಂದಿಗೆ ಶನಿವಾರ ನಗರದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತ್ವ ನೊಂದಣಿ ಮಾಡಿಸುವುದರೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ ಸದಸ್ಯತ್ವ ನೊಂದಣಿ ವೇಗ ಗೊಳಿಸಲು ಪೂರ್ವ ಸಿದ್ಧತೆ ಮಾಡಲಾಗಿದೆ. ಅದರ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಒಂದು ರಾಷ್ಟ್ರೀಯ ಹಿತಾಸಕ್ತಿಯಿರುವ ಪಕ್ಷ ಬಲಗೊಳ್ಳಬೇಕಿರುವುದು ಅಗತ್ಯತೆ ಅಷ್ಟೇ ಅಲ್ಲ ಅನಿವಾರ್ಯತೆಯೂ ಆಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುತ್ತೇವೆ ಎಂದರು.
ಇಂದು ಎಡಪಕ್ಷಗಳ ವಿಚಾರ ಧಾರೆಯೇ ದೇಶದ ಹೊರಗಿನಿಂದ ಬಂದಿದ್ದು, ಇನ್ನು ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದೇ ಎಓ ಹ್ಯೂಂ ಎನ್ನುವ ಓರ್ವ ಬ್ರಿಟೀಷ್ ಅಧಿಕಾರಿ ಆತನಿಗೆ ಭಾರತವನ್ನು ಬಲಗೊಳಿಸುವ ಉದ್ದೇಶವಿರಲಿಲ್ಲ. ಹೆಚ್ಚು ಕಾಲ ಆಳುವ ಉದ್ದೇಶ ಮಾತ್ರ ಇತ್ತು ಎಂದರು.
ಈಗಿರುವ ಕಾಂಗ್ರೆಸ್ ಪಕ್ಷ ತನ್ನ ಅಸ್ಥಿತ್ವದ ಉಳಿವಿಗೆ, ತನ್ನ ಅಧಿಕಾರದ ಹಪಾಹಪಿಗೆ ರಾಷ್ಟ್ರ ವಿರೋಧಿ ಪಕ್ಷಗಳ ಜೊತೆ ಕೈಜೋಡಿಸುವ ಹೀನ ಕೆಲಸಕ್ಕೆ ಕೈ ಹಾಕಿದೆ ಎಂದು ದೂರಿದರು. ಅದಕ್ಕೆ ರಾಹುಲ್ ಗಾಂಧಿ ಸಾಕ್ಷಿಯಾಗಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಹೇಳಿಕೆ, ಚಟುವಟಿಕೆಗಳನ್ನು ಗಮಿಸಿದರೆ ಅವರು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ತತ್ವದ ಮೇಲೆ ನಂಬಿಕೆ ಇರುವ ಬಿಜೆಪಿ ವಿಚಾರ ಜನಸಾಮಾನ್ಯರಿಗೆ ತಲುಪಿ ಪಕ್ಷ ಬಲವಾದಾಗ ಮಾತ್ರ ದೇಶಕ್ಕೆ ಬಲ ಬರುತ್ತದೆ ಎನ್ನುವುದನ್ನು ನಾವು ಅಭಿಯಾನದ ಸಂದರ್ಭದಲ್ಲಿ ಮನವರಿಕೆ ಮಾಡುತ್ತೇವೆ ಎಂದರು.
ಪ್ರತಿ ೫ ವರ್ಷಕ್ಕೊಮ್ಮೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತದೆ. ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯತ್ವ ಹೊಂದಿದ ಹೆಗ್ಗಳಿಕೆ ಹೊಂದಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವುದು, ಪಕ್ಷವನ್ನು ಸರ್ವ ಸ್ಪರ್ಶಿ ಮತ್ತು ಸರ್ವವ್ಯಾಪಿಗೊಳಿಸಿ ಎಲ್ಲಾ ವರ್ಗ, ಎಲ್ಲಾ ಭಾಗವನ್ನೂ ಒಳಗೊಳ್ಳುವಂತೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದೇಶದಲ್ಲಿ ೧೦ ಕೋಟಿ ಸದಸ್ಯತ್ವ ನೊಂದಣಿ ಗುರಿ ನೀಡಿದ್ದಾರೆ ಎಂದರು.
ಕರ್ನಾಟಕದಲ್ಲಿ ೧ ಕೋಟಿ ಸದಸ್ಯತ್ವ ನೊಂದಣಿ ಸಂಕಲ್ಪ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಮತಗಟ್ಟೆಗೆ ಅದನ್ನು ವಿಸ್ತರಿಸಿ, ಅಲ್ಲಿರುವ ಜನರ ಕನಿಷ್ಠ ಶೇ.೫೦ ರಷ್ಟು ಜನರನ್ನು ನೊಂದಾಯಿಸಲು ಉದ್ದೇಶಿಸಲಾಗಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಕೆ.ಪುಷ್ಪರಾಜ್ ಮಾತನಾಡಿ, ಬಿಜೆಪಿಯನ್ನು ಬಲ ಪಡಿಸುವ ಮೂಲಕ ರಾಷ್ಟ್ರವನ್ನು ಶಕ್ತಿಯುತಗೊಳಿಸಬೇಕಿದೆ ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಣಿ ಮಾಡಿಸುವ ಸಂಕಲ್ಪದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮನೆ ಮನೆಗಳಿಗೆ ತೆರಳಿ ಎಲ್ಲ ವರ್ಗದವರನ್ನು ಭೇಟಿ ಮಾಡಿ ಪಕ್ಷದ ತತ್ವ, ಸಿದ್ಧಾಂತಗಳನ್ನು ಮನವರಿಕೆ ಮಾಡುವ ಮೂಲಕ ಪಕ್ಷಕ್ಕೆ ಸೆಳೆದು ಸದಸ್ಯತ್ವ ನೊಂದಣಿ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ನಗರಸಭೆ ಸದಸ್ಯ ರಾಜು, ಜಯವರ್ಧನ್, ಹಿರೇಮಗಳೂರು ಕೇಶವ, ಹಿರೇಮಗಳೂರು ಪುಟ್ಟಸ್ವಾಮಿ, ರಾಕೇಶ್, ಪ್ರದೀಪ್ ಪೈ, ಮತ್ತಿತರರು ಇದ್ದರು.
BJP membership registration campaign launched