ಚಿಕ್ಕಮಗಳೂರು: ಎಲ್ಲಿ ಕ್ರೀಡಾಂಗಣ ಖಾಲಿ ಇರುತ್ತದೋ ಆ ದೇಶದ ಆಸ್ಪತ್ರೆಗಳು ಭರ್ತಿಯಾಗಿರುತ್ತವೆ. ಕ್ರೀಡಾಂಗಣದ ತುಂಬ ಕ್ರೀಡಾಕೂಟಗಳು ನಡೆಯುತ್ತ ತುಂಬಿದ್ದರೆ ಆ ಪಟ್ಟಣದ ಆಸ್ಪತ್ರೆಗಳು ಖಾಲಿ ಇರುತ್ತವೆ ಎಂದು ಶಿಕ್ಷಣ ಸಂಯೋಜಕ ಕೃಷ್ಣರಾಜ್ ಅರಸ್ ಅಭಿಪ್ರಾಯಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಮೂಹ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಇವರುಗಳು ಸಂಯುಕ್ತಾಶ್ರಯದಲ್ಲಿ ಕಸಬಾ-೧ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿಗಳ ಆರೋಗ್ಯಕ್ಕೆ ಪೂರಕವಾಗಿದ್ದು, ಇದರ ಯಶಸ್ವಿಗೆ ಪರಿಶ್ರಮ ಹಾಕುತ್ತಿರುವ ದೈಹಿಕ ಶಿಕ್ಷಕರ ಸೇವೆ ಶ್ಲಾಘನೀಯ ಎಂದರು.
ಕ್ರೀಡಾ ಸಾಮರ್ಥ್ಯದಿಂದ ವಿದ್ಯಾರ್ಥಿಗಳು ಆಟವಾಡಬೇಕು ಎಂದು ಸಲಹೆ ನೀಡಿದ ಅವರು, ಸರ್ಕಾರದ ಅನುದಾನದಲ್ಲಿ ಕ್ರೀಡಾಕೂಟ ನಡೆಸುವುದು ಅಸಾಧ್ಯ. ಇದಕ್ಕೆ ಸಮಾಜದ ದಾನಿಗಳು ನೆರವು ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಜೀವನದಲ್ಲಿ ಕ್ರೀಡೆ ಆರೋಗ್ಯದ ಒಂದು ಭಾಗ ಎಂದು ಭಾವಿಸುತ್ತೇನೆ. ವಿದ್ಯಾರ್ಥಿಗಳು ಒಳ್ಳೆಯ ಕ್ರೀಡಾಪಟುಗಳಾಗಿ ಜಿಲ್ಲೆ, ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕೆಂದು ಹಾರೈಸಿದರು.
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ ಇದ್ದಹಾಗೆ, ಈ ನಿಟ್ಟಿನಲ್ಲಿ ಗೆದ್ದವರು ಬೀಗದೆ, ಸೋತವರು ಭಾಗದೆ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದು ಹೇಳಿದರು.
ಸದೃಢ ದೇಹಕ್ಕಾಗಿ ಕ್ರೀಡೆಗಳು ಸಹಕಾರಿಯಾಗಿದ್ದು, ಅದಕ್ಕಾಗಿ ವಿದ್ಯಾರ್ಥಿಗಳು ನಿಂತ ನೀರಾಗದೆ ಚಿಲುಮೆಯಾಗಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪೂರ್ತಿ ಅತ್ಯಂತ ಮುಖ್ಯ. ಈ ಕ್ರೀಡಾಕೂಟಗಳಲ್ಲಿ ಗೆಲುವೇ ಮುಖ್ಯ ಅಲ್ಲ. ಎಲ್ಲರೂ ನ್ಯಾಯಯುತವಾಗಿ ಗೆಲ್ಲಬೇಕೆಂಬ ಮನೋಭಾವ ಮೂಡಬೇಕು ಎಂದು ತಿಳಿಸಿದರು.
ಬಸವನಹಳ್ಳಿ ಶಾಲೆ ಎಸ್ಡಿಎಂಸಿ ಅಧ್ಯಕ್ಷೆ ದೀಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ಚಂದ್ರಪ್ಪ, ರಾಧಕೃಷ್ಣ, ಶಿವಪ್ಪ, ಚಂದ್ರಯ್ಯ, ಜೋಗಪ್ಪ, ಸುಮಿತ್ರ, ಗೀತಾ, ರವಿ ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ಬಸವನಹಳ್ಳಿ ಶಾಲೆ ಮುಖ್ಯ ಶಿಕ್ಷಕ ರಾಜನಾಯ್ಕ ಸ್ವಾಗತಿಸಿದರು.
Kasaba-1 Zone Level Primary Schools Sports Festival