ಚಿಕ್ಕಮಗಳೂರು: ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಮೀನುಗಳನ್ನು ಸಾಕಲು ನೀಡಿರುವ ಕೆರೆಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ ಮೀನುಗಾರಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್ ಎಚ್ಚರಿಕೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ತಾಲೂಕು ಶ್ರೀ ಗಂಗಾ ಪ.ಜಾತಿ, ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಇಲಾಖೆ ಪ.ಜಾತಿ, ಪ.ವರ್ಗದ ಮೀನುಗಾರರನ್ನು, ಅವರ ಸಹಕಾರ ಸಂಘವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮೀನುಗಾರರಿಗೆ ನೀಡಲಾಗುವ ಸವಲತ್ತು, ಸೌಲಭ್ಯಗಳನ್ನು ಒದಗಿಸದೆ ವಂಚಿಸುತ್ತಿದೆ. ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಮತ್ತು ಅವರ ಸಹಕಾರ ಸಂಘಕ್ಕೆ ಮೀನು ಸಾಕಾಣಿಕೆಗಾಗಿ ಕುಲಗೆಟ್ಟು ಹೋಗಿರುವ ಕೆರೆಗಳನ್ನು ನೀಡಿದೆ ಎಂದು ಆರೋಪಿಸಿದರು.
ಪ.ಜಾತಿ ಪ.ವರ್ಗದ ಮೀನುಗಾರರಿಗೆ ನೀಡಿರುವ ಕೆರೆಗಳಲ್ಲಿ ಜೊಂಡು ಬೆಳೆದಿವೆ, ಕೆರೆಗಳು ಒತ್ತುವರಿಯಾಗಿವೆ, ನಗರದ ಚರಂಡಿಗಳ ನೀರು ಆ ಕೆರೆಗಳಿಗೆ ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿದ್ದು ವಿಷಮಯವಾಗಿದೆ. ಇದರಿಂದಾಗಿ ಮೀನುಗಳು ಸಾಯುತ್ತಿದ್ದು ಅದನ್ನೇ ನಂಬಿ ಬದುಕುತ್ತಿ ರುವ ಪ.ಜಾತಿ, ಪ.ವರ್ಗದ ಮೀನುಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದು ದಿನನಿತ್ಯದ ಬದುಕಿಗಾಗಿ ಪರದಾಡುತ್ತಿದ್ದಾರೆ ಎಂದು ದೂರಿದರು.
ಪ.ಜಾತಿ, ಪ.ವರ್ಗದ ಮೀನುಗಾರರಿಗೆ ನೀಡಿರುವ ಹಿರೇಮಗಳೂರು ಕೆರೆ ಕಲುಷಿತಗೊಂಡು ಲಕ್ಷಾಂತರ ರೂ. ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ನಷ್ಟ ಅನುಭವಿಸಿರುವವರಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ, ನಗರಸಭೆಗೆ, ಜಿಲ್ಲಾಧಿಕಾರಿಗಳಿಗೆ, ಮೀನುಗಾರಿಕೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ, ಕೆರೆಯನ್ನು ಅಭಿವೃದ್ಧಿಪಡಿಸಿಲ್ಲ, ಮೀನುಗಾರರ ಮತ್ತು ಆ ವರ್ಗದ ಸಹಕಾರ ಸಂಘದ ರಕ್ಷಣೆಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀನುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿರುವ ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಪರಿಹಾರ ನೀಡದಿದ್ದಲ್ಲಿ, ಕೆರೆಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ, ಮೀನುಗಾರಿಕೆ ಇಲಾಖೆ, ನೀರಾವರಿ ಇಲಾಖೆ, ನಗರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ ಮಾತನಾಡಿ, ಮೀನುಗಾರಿಕೆ ಇಲಾಖೆ ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಸರ್ಕಾರದ ಅನುದಾನ, ಸವಲತ್ತು, ಸೌಲಭ್ಯಗಳನ್ನು ನೀಡಬೇಕು, ನಷ್ಟ ಅನುಭವಿಸಿರುವ ಅವರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಶ್ರೀ ಗಂಗಾ ಪ.ಜಾತಿ, ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ. ಧರ್ಮೇಶ್ ತಮ್ಮ ಸಂಘವನ್ನು ಮುಚ್ಚಿಸಲು ಇಲಾಖೆ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ಪ.ವರ್ಗದ ಮೀನುಗಾರರಿಗೆ ಕೇವಲ ೧೫ ದಿನದ ಮೀನು ಮರಿಗಳನ್ನು ಸಾಕಾಣಿಕೆಗೆ ನೀಡುತ್ತಿದ್ದಾರೆ, ಇದರಿಂದಾಗಿ ಅವು ಸತ್ತು ಹೋಗುತ್ತಿವೆ, ಕಲುಷಿತ ನೀರಿನಿಂದ ಮೀನುಗಳು ಸತ್ತು ನಷ್ಟ ವಾದರೂ ಪರಿಹಾರ ನೀಡುತ್ತಿಲ್ಲ, ಕೆರೆಯ ನೀರನ್ನು ಸ್ವಚ್ಛಗೊಳಿಸುತ್ತಿಲ್ಲ, ಸರ್ಕಾರದ ಯಾವುದೇ ಅನುದಾನ, ಸವಲತ್ತು, ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ದೂರಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ಸಿ.ಜಯರಾಮಯ್ಯ, ಕೆಂಚಪ್ಪ, ಸಂಘದ ಉಪಾಧ್ಯಕ್ಷ ರಾಮಯ್ಯ, ನಿರ್ದೇಶಕರಾದ ಕೆ.ನರಸಿಂಹಮೂರ್ತಿ, ಗಣೇಶ, ಸಿ.ಬಿ.ಮಂಜು, ಸುರೇಶ್, ಮೋಹನ ಕುಮಾರಿ, ಸಿ.ಡಿ.ಕಾವ್ಯ, ಪಿ.ಎಲ್.ರಂಜಿತ್, ದಿವ್ಯ, ಸಭೆಯಲ್ಲಿ ಪಾಲ್ಗೊಂಡಿದ್ದರು.
Annual All Members Meeting of Fisheries Multi Purpose Cooperative Society