ಚಿಕ್ಕಮಗಳೂರು: ಒಕ್ಕಲಿಗ ಮತ್ತು ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಆಜಾದ್ ಪಾರ್ಕಿನ ಬಳಿ ಕಾಂಗ್ರೆಸ್ ಬಾವುಟದೊಂದಿಗೆ ಸಮಾವೇಶಗೊಂಡ ಹಲವಾರು ಕಾರ್ಯಕರ್ತರು ಶಾಸಕ ಮುನಿರತ್ನನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಮುನಿರತ್ನ ಅವರು ದಲಿತ, ಒಕ್ಕಲಿಗ ಸಮುದಾಯದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯ. ಆತನದು ಎಗ್ಗಿಲ್ಲದ ನಾಲಿಗೆ. ಇಂತಹ ಸಂಸ್ಕೃತಿ ಹೀನರನ್ನು ಜನ ಇನ್ನು ಮುಂದೆ ಆಯ್ಕೆ ಮಾಡಬಾರದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ದರೆ ಮುನಿರತ್ನನನ್ನು ಶಾಸಕ ಸ್ಥಾನದಿಂದ ತೆಗೆದುಹಾಕಿ ಆತನನ್ನು ಗಡಿಪಾರು ಮಾಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಅಧ್ಯಕ್ಷ ಡಾ. ಡಿ.ಎಲ್ ವಿಜಯ್ಕುಮಾರ್ ಮಾತನಾಡಿ, ಶಾಸಕ ಮುನಿರತ್ನ ದಬ್ಬಾಳಿಕೆ ಪ್ರದರ್ಶಿಸಿದ್ದಾನೆ. ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾತಾಡಿದ್ದಾನೆ. ಕಸ ವಿಲೇವಾರಿ ಸಂಬಂಧ ಗುತ್ತಿಗೆದಾರನಿಗೆ ನಿಂದಿಸಿ ಅವಾಚ್ಯ ಶಬ್ದ ಬಳಸಿರುವುದು ಖಂಡನೀಯ. ಆತನ ವಿರುದ್ಧ ಕಠಿಣ ಕ್ರi ಆಗಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಅನೀಸ್ಖೈಸರ್, ಮಲ್ಲೇಶಸ್ವಾಮಿ, ಡಿ.ಸಿ.ಪುಟ್ಟೇಗೌಡ, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Protest demanding dismissal of MLA Munirath from MLA position