ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಯುವಕರಿಬ್ಬರು ಪ್ಯಾಲೆಸ್ತೇನಿಯನ್ ಧ್ವಜ ಹಿಡಿದು ನಗರಾದ್ಯಂತ ಸಂಚಾರ ನಡೆಸಿದ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರ ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಮುಸ್ಲಿಂ ಯುವಕರು ಪ್ಯಾಲೆಸ್ತೇನ್ ಧ್ವಜ ಹಿಡಿದು ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರಿನ ಕೆ.ಎಂ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿಯೇ ಯುವಕರು ಧ್ವಜ ಹಿಡಿದು ಓಡಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪ್ಯಾಲೆಸ್ತೇನಿಯನ್ ಧ್ವಜ ಹಿಡಿದು ಓಡಾಡುವ ಮೂಲಕ ದೇಶ ದ್ರೋಹದ ಕೆಲಸ ಮಾಡಿರುವ ಯುವಕರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್ ಕೋಟ್ಯಾನ್, ಶ್ಯಾಮ್ ವಿ. ಗೌಡ, ಕೃಷ್ಣ, ಅಮಿತ್, ರಾಜೇಶ್, ಮಂಜು, ಕಿಟ್ಟಿ, ಜಾನಕಿ ರಾಮ್ ಮತ್ತಿತರರಿದ್ದರು.
Walking in the city with the Palestinian flag