ಚಿಕ್ಕಮಗಳೂರು: ಎತ್ತಿನ ಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ ಬಳಿಕ ಬಯಲು ಭಾಗದ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು, ಇದರ ಭಾಗವಾಗಿ ಇತಿಹಾಸ ಪ್ರಸಿದ್ಧ ಬೆಳವಾಡಿ ಕೆರೆ ಕೋಡಿ ಬಿದ್ದಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಬೆಳವಾಡಿ ಕೆರೆ ಏರಿ ಸುಮಾರು ೧ ಕಿ.ಮೀಟರ್ವರೆಗೆ ರಸ್ತೆ ಬಿರುಕು ಬಿಟ್ಟಿರುವುದರಿಂದ ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳವಾಡಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಮೇರೆಗೆ ಇಂದು ಬೆಳವಾಡಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆರೆ ಏರಿ ಮತ್ತು ಒಂದು ಕಿ.ಮೀಟರ್ ರಸ್ತೆ ಅಗಲೀಕರಣದ ಕಾಮಗಾರಿ ಕಳಪೆಯಾಗಿದ್ದು, ಬಿರುಕು ಬಿಡಲು ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಧ್ಯ ಬೆಳವಾಡಿ ಕೆರೆಗೆ ೧೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದಾಗಿ ಮಾಹಿತಿ ಇದೆ ಎಂದ ಅವರು ಮುಂದೆ ಹಂತ ಹಂತವಾಗಿ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಶಾಸಕರು ರಸ್ತೆ ಹಾಗೂ ಕೆರೆ ಏರಿ ಬಿರುಕು ಬಿಟ್ಟಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಆಗಮಿಸಿದ ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಂದಿನ ಹಂತದ ನೀರಾವರಿ ಯೋಜನೆಗಳನ್ನು ಜಾರಿಮಾಡುವಾಗ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ರೀತಿಯಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಕಾರ್ಯರೂಪಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Belawadi lake crack-Action against culprits