ಚಿಕ್ಕಮಗಳೂರು: ನಗರಸಭೆ ವಾಣಿಜ್ಯ ಮಳಿಗೆಗಳ ಬಾಕಿ ಇರುವ ೨ ಕೋಟಿ ರೂ. ಬಾಡಿಗೆ ಹಣವನ್ನು ಇನ್ನೊಂದು ತಿಂಗಳಲ್ಲಿ ವಸೂಲಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಗುರುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಬಿ.ಸಿ.ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨ ಕೋಟಿ ರೂ.ನಷ್ಟು ದೊಡ್ಡ ಮೊತ್ತದ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ವಸೂಲಾತಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದರು.
ಈ ವೇಳೆ ಸದಸ್ಯರೆಲ್ಲರೂ ಧ್ವನಿಗೂಡಿಸಿ ಕ್ರಮಕ್ಕೆ ಸಮ್ಮತಿಸಿದರು. ಇನ್ನೊಂದು ತಿಂಗಳ ಒಳಗಾಗಿ ಬಾಕಿ ವಸೂಲಿಗೆ ಕ್ರಮ ಕೈಗೊಂಡು ಪ್ರಗತಿ ವರದಿಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಬೋಜೇಗೌಡ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ೨ ಕೋಟಿ ರೂ.ಗಿಂತಲೂ ಹೆಚ್ಚಿನ ಬಾಡಿಗೆ ಬಾಕಿ ಇದೆ ಎಂದು ಮಾಹಿತಿ ನೀಡಿದ್ದೀರಿ ಅವರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡರು ಬಾಕಿಹಣಕ್ಕೆ ಸಮನಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ಣ ಹಣ ವಸೂಲಾತಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಲಹ ಮಾಡಿದರು.
ನಗರದ ಎಂಜಿ ರಸ್ತೆಯಲ್ಲಿ ನಗರಸಭೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷಕಳೆದರೂ ಮಳಿಗೆಗಳನ್ನು ಬಾಡಿಗೆ ನೀಡದಿರುವ ಬಗ್ಗೆ ಜೆಡಿಎಸ್ ಸದಸ್ಯ ಎ.ಸಿ.ಕುಮಾರ್ ಆಕ್ಷೇಪಿಸಿದರು.
ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ನಗರಸಭೆಗೆ ಆದಾಯ ನಷ್ಟವಾಗಿರುವ ಬಗ್ಗೆ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ ಇತರೆ ಸದಸ್ಯರು ಪ್ರಶ್ನೆ ಮಾಡಿದರು.
ಈ ವೇಳೆ ಬಾಡಿಗೆ ಹೆಚ್ಚು ಎನ್ನುವ ಕಾರಣದಿಂದ ಯಾರೂ ಮುಂದೆ ಬರುತ್ತಿಲ್ಲ ಎಂದು ಆಯುಕ್ತ ಬಿ.ಸಿ.ಬಸವರಾಜು ಸ್ಪಷ್ಟನೆ ನೀಡಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಮಧುಕುಮಾರ ರಾಜ್ ಅರಸ್ ನೀವು ಯಾವ ಸದಸ್ಯರೊಂದಿಗೂ ಚರ್ಚಿಸದೆ ಬಾಡಿಗೆ ನಿಗಧಿ ಪಡಿಸಿರುವುದೇ ಇದಕ್ಕೆ ಕಾರಣ ಎಂದರು.
ಎಸ್.ಎಲ್.ಬೋಜೇಗೌಡ ಮಾತನಾಡಿ, ಅಧ್ಯಕ್ಷರ ನೇತೃತ್ವದಲ್ಲಿ ಇತರೆ ಸದಸ್ಯನ್ನೊಳಗೊಂಡ ಒಂದು ಸಮಿತಿ ರಚಿಸಿ ಒಂದು ತಿಂಗಳ ಒಳಗಾಗಿ ಬಾಡಿಗೆ ನಿಗಧಿ ವಿಚಾರದಲ್ಲಿ ಅಂತಿಮ ತೀರ್ಮಾನ ಮಾಡಿ, ಅಷ್ಟರೊಳಗೆ ಕಟ್ಟಡದಲ್ಲಿ ಶೌಚಾಲಯ ಸೇರಿದಂತೆ ಇತರೆ ಸಣ್ಣ ಪುಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಳ್ಳಿ ಎಂದು ಸಲಹೆ ಮಾಡಿದರು. ಅದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.
ಕತ್ರಿ ಮಾರಮ್ಮ ದೇವಸ್ಥಾನದ ಬಳಿ ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಕಟ್ಟಡ ಸಹ ಬಾಡಿಗೆ ನೀಡದೆ ಖಾಲಿ ಬಿದ್ದಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಕಟ್ಟಡವು ಎಸ್ಸಿಪಿ, ಎಸ್ಟಿಪಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ದಲಿತರಿಗೆ ಬಾಡಿಗೆ ನೀಡಬೇಕು ಎನ್ನುವ ಬೇಡಿಕೆ ಇಟ್ಟಿವೆ ಎಂದು ಆಯುಕ್ತರು ಸಭೆಗೆ ತಿಳಿಸಿದರು.
ಇದಕ್ಕೆ ಸಿ.ಟಿ.ರವಿ ಪ್ರತಿಕ್ರಿಯಿಸಿ ಸರ್ಕಾರದ ನಿಯಮಗಳು, ಕಾನೂನು ಏನು ಹೇಳುತ್ತದೋ ಅದೇ ರೀತಿ ಕ್ರಮ ಕೈಗೊಳ್ಳಿ ಎಂದರು. ಈ ಕುರಿತು ಅಭಿಪ್ರಾಯ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಸೂಚನೆ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದರು.
ನಗರಸಭೆ ವಾಹನಗಳ ನಿರ್ವಹಣೆಗೆ ವರ್ಷಕ್ಕೆ ೨೬ ಲಕ್ಷ ರೂ.ವೆಚ್ಚ ತಗುಲಿದೆ ಎಂದು ಮಾಹಿತಿ ಇದೆ. ಇದು ಅಸಹಜ ಎನಿಸುವುದಿಲ್ಲವೇ ಎಂದು ಬೋಜೇಗೌಡ ಪ್ರಶ್ನಿಸಿದರು. ಸಿ.ಟಿ.ರವಿ ಮಾತನಾಡಿ ನಗರಸಭೆಯಲ್ಲೇ ಒಂದು ಸರ್ವೀಸ್ ಸೆಂಟರ್ ತೆರೆದು ನಮ್ಮ ಸಿಬ್ಬಂದಿಗೆ ತರಬೇತಿ ನೀಡಲು ಸಲಹೆ ನೀಡಿದರು. ಅದರಿಂದ ವಾಹನಗಳು ದೀರ್ಘಕಾಲ ಸುರಕ್ಷಿತವಾಗಿರುವುದಲ್ಲದೆ. ನಗರಸಭೆಗೆ ವೆಚ್ಚವೂ ಉಳಿತಾಯವಾಗಲಿದೆ ಎಂದರು.
ಆಶ್ರಯ ಬಡಾವಣೆಗೆ ಅಮೃತ್ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಇದು ತಾರತಮ್ಯ ಎಂದು ಸದಸ್ಯರು ದೂರಿದರು. ಅಮೃತ್ ಯಫಜನೆ ಪೂರ್ಣಗೊಳ್ಳದೆ ಯೋಜನೆಯನ್ನು ನಗರಸಭೆ ಹಸ್ತಾಂತರಿಸಿಕೊಂಡಿರುವುದೇ ಸಮಸ್ಯೆಗೆ ಕಾರಣ ಎಂದು ಬೋಜೇಗೌಡ ಹೇಳಿದರು. ಟೆಂಡರ್ ಗೈಡ್ಲೈನ್ ಪ್ರಕಾರ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಯೋಜನೆ ಹಸ್ತಾಂತರಿಸಿಕೊಳ್ಳಲು ಸಲಹೆ ಮಾಡಿದ್ದೆವು ಹಾಗೆ ಆಗಿಲ್ಲ ಎಂದು ಸಿ.ಟಿ.ರವಿ ಹೇಳಿದರು.
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಬೋಜೇಗೌಡ ಅವರು ಸಲಹೆ ಮಾಡಿದರು.
ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಚಾರ ಸಭೆಯಲ್ಲಿ ಮತ್ತೆ ಸದ್ದು ಮಾಡಿತು. ಪ್ರತಿ ತಿಂಗಳು ೫೦ ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣ ದಾಖಲಾಗುತ್ತಿವೆ ಎಂದು ಸದಸ್ಯ ಎ.ಸಿ.ಕುಮಾರ್ ಹೇಳಿದರು. ನಗರದಲ್ಲಿರುವ ಹೆಣ್ಣು ಹಾಗೂ ಗಂಡು ನಾಯಿಗಳ ಲೆಕ್ಕ ಇದೆಯೇನ್ರಿ ಎಂಬ ಬೋಜೇಗೌಡರ ಪ್ರಶ್ನೆಗೆ ಸಭೆ ನಕ್ಕಿತು. ೨೦೨೩ ರ ಸರ್ವೇ ಪ್ರಕಾರ ೫೨೫೦ ನಾಯಿಗಳಿವೆ ಎಂದು ಆರೋಗ್ಯ ನಿರೀಕ್ಷಕರು ಮಾಹಿತಿ ನೀಡಿದರು.
ಈ ವೇಳೆ ನಾಯಿ ಕಚ್ಚಿದ ಬಗ್ಗೆ ದೂರುಗಳು ಬಂದಿಲ್ಲ ಎಂದು ಆರೋಗ್ಯ ನಿರೀಕ್ಷರು ನೀಡಿದ ಉತ್ತರಕ್ಕೆ ಬಹುತೇಕ ಎಲ್ಲಾ ಸದಸ್ಯರು ಅಕ್ರೋಶ ವ್ಯಕತಪಡಿಸಿದರು. ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಬೋಜೇಗೌಡ ಈ ರೀತಿ ಲಘುವಾದ ಉತ್ತರ ನೀಡಬೇಡಿ. ವಿಷಯದ ಗಂಭೀರತೆ ಅರಿತು ಉತ್ತರ ನೀಡಿ ಎಂದು ಎಚ್ಚರಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಅನು ಮಧುಕರ್ ಉಪಸ್ಥಿತರಿದ್ದರು.
2 crore dues of municipal commercial shops. Rent recovery is an appropriate action