ಚಿಕ್ಕಮಗಳೂರು: ಮಲೆನಾಡಿಗರ ತಾಳ್ಮೆಯ ಕಟ್ಟೆಯೊಡೆಯುವ ಮುನ್ನನ ಸರಕಾರ, ಅರಣ್ಯ ಇಲಾಖೆ ಎಚೆತ್ತುಕೊಂಡು ಮಲೆನಾಡಿನ ಒತ್ತುವರಿ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಎಚ್ಚರಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಜನಪ್ರತಿನಿಗಳು, ಸಚಿವರು ದನಿಎತ್ತಿದ್ದಾರೆ. ಆದರೆ, ಕಾರ್ಯಗತವಾಗಿಲ್ಲ. ಸಮಸ್ಯೆ ಹಾಗೇ ಉಳಿದಿರುವ ಪರಿಣಾಮ ಇಂದು ಇರುವ ಭೂಮಿ ಎಲ್ಲದೂ ತಮ್ಮದೇ ಎಂದು ಅರಣ್ಯ ಇಲಾಖೆ ರೈತರ ಎತ್ತಂಗಡಿಗೆ ಮುಂದಾಗಿದೆ. ಮಲೆನಾಡಿಗರು ಯಾರೂ ಅಮಾಯಕರಲ್ಲ. ರೈತರು, ಒತ್ತುವರಿದಾರರ ತಾಳ್ಮೆಯ ಕಟ್ಟೆಯೊಡೆದರೆ ಮುಂದಾಗುವ ಪರಿಸ್ಥಿತಿಯನ್ನು ಯಾರೂ ಊಹಿಸಲಾಗದು. ಅದಕ್ಕೂ ಮುನ್ನ ಸರಕಾರ, ಅಕಾರಿಗಳು ಕಣ್ತೆರೆದು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಅರಣ್ಯಕ್ಕೂ ಮಲೆನಾಡಿನ ಜನರಿಗೂ ಅವಿನಾಭಾವ ಸಂಬಂಧವಿದೆ. ಅದನ್ನು ಅರಿತವರು ಅರಣ್ಯ ಸಚಿವರಾಗಬೇಕಿತ್ತು.ಅರಣ್ಯ ಏನೆಂದು ಗೊತ್ತಿಲ್ಲದವರು ಇಲ್ಲಿನ ಸಮಸ್ಯೆ ಬಗೆಹರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇನಾಂ ಭೂಮಿ, ಹುಲುಬನ್ನಿ, ಸೊಪ್ಪಿನಬೆಟ್ಟ, ಗೋಮಾಳ ಇವು ನಮ್ಮ ಪೂರ್ವಜರ ಕಾಲದಿಂದಲೂ ಮೀಸಲಿಟ್ಟ ಭೂಮಿ. ಇಂದು ಎಲ್ಲ ಅರಣ್ಯ ಇಲಾಖೆ ಗಿಡನೆಟ್ಟು ತಮ್ಮದೇ ಎಂದು ಹೇಳುತ್ತಿದೆ. ಶಾಲೆ, ಅಂಗನವಾಡಿ, ಆಸ್ಪತ್ರೆ, ಸ್ಮಶಾನಕ್ಕೆ ಒಂದು ಗುಂಟೆ ಜಾಗ ಕೊಡಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ೧.೫೦ ಲಕ್ಷ ಜನ ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ ಅವರಿಗೆ ಇನ್ನೂ ನಿವೇಶನ ನೀಡಿಲ್ಲ. ಮಾತೆತ್ತಿದರೆ ಎತ್ತಂಗಡಿ ಮಾಡುತ್ತೇವೆ ಎನ್ನುತ್ತಾರೆ. ಒಂದೆರಡು ಎಕರೆ ಜಮೀನನ್ನು ಜೀವನಕ್ಕಾಗಿ ಒತ್ತುವರಿ ಮಾಡಿಕೊಂಡವರನ್ನು ಎತ್ತಂಗಡಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಜನಾಕ್ರೋಶ ಸ್ಪೋಟಗೊಳ್ಳುವ ಕಾಲ ದೂರವಿಲ್ಲ. ಇದನ್ನು ಸರಕಾರ ಅಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಈವರೆಗೆ ಟಿಎಪಿಸಿಎಂಎಸ್ ನಿಂದ ಪ್ಯಾಕ್ಸ್ಗಳಿಗೆ ಆಹಾರ ಧಾನ್ಯ ಸರಬರಾಜಾಗುತ್ತಿತ್ತು. ಇದೀಗ ಆಹಾರ ನಿಗಮದಿಂದ ಪೂರೈಸಲು ಸರಕಾರ ಆದೇಶ ಮಾಡಿದೆ. ಇದು ಅವೈಜ್ಞಾನಿಕ ಕ್ರಮ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನಡುವೆ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಅನುದಾನಿತ ಶಾಲೆಗಳಲ್ಲಿ ಶೇ.೫೦ ರಷ್ಟು ಶಿಕ್ಷಕರಿಲ್ಲ. ಹೀಗಾದರೆ ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ ? ಅತಿಥಿ ಶಿಕ್ಷಕರಿಗೆ ೩ ತಿಂಗಳಾದರೂ ಇನ್ನೂ ವೇತನ ನೀಡಿಲ್ಲ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಇನ್ನೂ ಪಠ್ಯಪುಸ್ತಕ, ಸಮವಸ್ತ್ರ ನೀಡಿಲ್ಲ.
ಸರಕಾರಿ ಶಾಲೆಗಳಿಗೆ ನೀಡುವ ಆದೇಶ ಅನುದಾನಿತ ಶಾಲೆಗಳಿಗೂ ಅನ್ವಯಿಸುವಂತಿರಬೇಕು ಎಂದರು. ಶಾಲೆ ಮಾನ್ಯತೆ ನವೀಕರಣದ ಹೆಸರಲ್ಲಿ ತೊಂದರೆ ನೀಡಲಾಗುತ್ತಿದೆ. ಶಾಶ್ವತ ಮಾನ್ಯತಾ ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯರಾದ ದಿನೇಶ್, ಕುಮಾರೇಗೌಡ, ದಿನೇಶ್ಕುಮಾರ್ ಇದ್ದರು.
A logical conclusion is needed to the problem of hill encroachment