ಚಿಕ್ಕಮಗಳೂರು: ಉತ್ತಮವಾದ ಕ್ರೀಡಾಪಟುಗಳು ಆಯ್ಕೆಯಾಗಬೇಕೆಂಬ ದೃಷ್ಟಿಯಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಸರ್ಕಾರ ಕ್ರೀಡಾಕೂಟ ನಡೆಸಲು ಉದ್ದೇಶ ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ತಿಳಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಶಾಲಾ ಗ್ರೇಡ್-೨, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವಾಗಿದ್ದು, ಇದನ್ನು ಸಮರ್ಪಕವಾಗಿ ಕೊಡದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ ಎಂದು ವಿಷಾಧಿಸಿದರು.
೧೪೫೮ ಜೂನಿಯರ್ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರುಗಳಿಲ್ಲ. ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೫೦ ರಷ್ಟು ಶಿಕ್ಷಕರಿಲ್ಲ, ಈ ಕಾರಣದಿಂದ ಗುಣಮಟ್ಟದ ಶಿಕ್ಷಣ, ಕ್ರೀಡೆ ಮರೀಚಿಕೆಯಾಗಲಿದೆ ಎಂದು ಹೇಳಿದರು.
ಶಿಕ್ಷಕರ ಕೊರತೆಯನ್ನು ನೀಗಿಸಲು ಕೂಡಲೇ ಭರ್ತಿಮಾಡಬೇಕು ಎಂದು ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದೇವೆ, ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ಶಕ್ತಿ ಕೊಟ್ಟಿದ್ದೀರಿ, ಶಿಕ್ಷಕರ ಸಮಸ್ಯೆ ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಆಟ ಬದುಕಿನ ಭಾಗವಾದರೆ ಜೀವನ ಸುಂದರವಾಗಿರುತ್ತದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಕ್ರೀಡೆಯನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕ್ರೀಡೆ ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ದೇಶದ ಆರೋಗ್ಯವೂ ಚೆನ್ನಾಗಿರಬೇಕು ಎಂಬ ಉದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾ ಎಂಬ ನೂತನ ಯೋಜನೆಯನ್ನು ಜಾರಿಮಾಡಿ, ಕ್ರೀಡೆಗೆ ಉತ್ತೇಜನ ನೀಡುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.
ಕ್ರೀಡಾಕೂಟಗಳಿಗೆ ಸರ್ಕಾರ ಅತಿ ಕಡಿಮೆ ಅನುದಾನ ನೀಡುತ್ತಿರುವ ಬಗ್ಗೆ ಭೋಜೇಗೌಡರೊಂದಿಗೆ ಸೇರಿ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದು ಚರ್ಚಿಸಿದ್ದೇವೆ. ಕ್ರೀಡಾಕೂಟಕ್ಕೆ ಖರ್ಚಾಗುವ ಅರ್ಧಭಾಗದಷ್ಟಾದರೂ ಸರ್ಕಾರ ಭರಿಸಬೇಕು ಎಂಬುದಕ್ಕೆ ಪ್ರಯತ್ನ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಶೈಕ್ಷಣಿಕ ಸಂಯೋಜಕ ವೀರೇಶ್ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಈವರೆಗೆ ಚಿಕ್ಕಮಗಳೂರು ತಾಲ್ಲೂಕಿನ ೧೧ ವಲಯಗಳಲ್ಲಿ ಒಂದೊಂದು ಶಾಲೆ ಅತಿಥೇಯ ಶಾಲೆಯಾಗಿ ವಹಿಸಿಕೊಂಡು ಕ್ರೀಡಾಕೂಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದಾರೆಂದು ಹೇಳಿದರು.
ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಸಾಕಷ್ಟು ಕ್ರೀಡಾಂಗಣದ ಕೊರತೆಗಳು ಇದ್ದರೂ ಸಹ ಬಹಳ ಉತ್ಸಾಹದಿಂದ ದೈಹಿಕ ಶಿಕ್ಷಕರು ಕ್ರೀಡಾಪಟುಗಳನ್ನು ಆಯ್ಕೆಮಾಡಿ ಈ ಕ್ರೀಡಾಕೂಟಕ್ಕೆ ಕರೆತಂದಿದ್ದಾರೆಂದು ಅಭಿನಂದಿಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಶೇರ್ ಅಲಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧೀಕ್ಷಕ ಪಾಲಾಕ್ಷಮೂರ್ತಿ, ಶಿಕ್ಷಣ ಸಂಯೋಜಕ ಜಗದೀಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪರಮೇಶ್ವರಪ್ಪ, ಕಿರಣ್ ಕುಮಾರ್, ಅಜ್ಜಯ್ಯ, ಶಿವಕುಮಾರ್, ಶಿವಪ್ಪ, ಕುಮಾರ್ ಸ್ವಾಮಿ, ವಸಂತ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ದೈಹಿಕ ಶಿಕ್ಷಕ ಕೆ.ಆರ್ ಶಿವಕುಮಾರ್ ಸ್ವಾಗತಿಸಿ, ಕುಮಾರ್ಸ್ವಾಮಿ ನಿರೂಪಿಸಿ, ಕೊನೆಯಲ್ಲಿ ಶಿವಪ್ಪ ವಂದಿಸಿದರು.
Chikmagalur taluk level senior primary schools sports meet