ಚಿಕ್ಕಮಗಳೂರು: ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಒಗ್ಗಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಅವರು ಭಾನುವಾರ ತಾಲ್ಲೂಕಿನ ಬೆಳವಾಡಿ ಕೆರೆಗೆ ಬಾಗೀನ ಅರ್ಪಿಸಿ ನಂತರ ಮಾತನಾಡಿದರು. ಲಕ್ಯ ಹೋಬಳಿ ರೈತಾಪಿ ಜನರ ಜೀವನಾಡಿಯಾಗಿರುವ ಬೆಳವಾಡಿ ಕೆರೆ ಭರ್ತಿಯಾಗಿ ಎಲ್ಲರ ಮೊಗದಲ್ಲಿ ಸಂತಸ ಕಾಣುತ್ತಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಹೆಚ್ಚು ನೀರು ಹರಿದು ಬಂದು ಬೆಳವಾಡಿ ಕೆರೆ ತುಂಬಿದೆ. ಈ ವಿಚಾರದಲ್ಲಿ ಮನುಷ್ಯ ಪ್ರಯತ್ನದ ಜೊತೆಗೆ ದೈವ ಕೃಪೆಯೂ ಬೇಕಾಗುತ್ತದೆ ಎಂದರು.
ಈ ಬಾರಿ ಕಳಸಾಪುರ ಹಾಗೂ ಈಶ್ವರಳ್ಳಿ ಕೆರೆಗಳಿಗೆ ಕರಗಡ ಏತ ನೀರಾವರಿಯಿಂದ ನೀರು ತುಂಬಿಸಲಾಗಿತ್ತು. ಆದರೆ ಬೆಳವಾಡಿ ಕೆರೆಗೆ ನೀರು ಬಂದಿರಲಿಲ್ಲ ಕ್ಷೇತ್ರದ ಜನರ ಅದೃಷ್ಠ ಹಾಗೂ ದೇವರ ಆಶೀರ್ವಾದ, ಸಿರಿಗೆರೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯರ ಆಶೀರ್ವಾದದಿಂದ ಹಳೇಬೀಡು ದ್ವಾರ ಸಮುದ್ರ ಕೆರೆ ತುಂಬಿ ಈಗ ಬೆಳವಾಡಿ ಕೆರೆ ಭರ್ತಿಯಾಗಿದೆ ಎಂದರು.
ಈಗಾಗಲೆ ದೇವನೂರು ಮತ್ತು ಮಾಚೇನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿದೆ. ರಣಘಟ್ಟ ಮತ್ತು ಭದ್ರಾ ಉಪ ಕಣಿವೆ ಯೋಜನೆಗಳು ಪೂರ್ಣಗೊಂಡಾಗ ಶಾಶ್ವತವಾಗಿ ಕೆರೆ ತುಂಬಲಿದೆ. ಭದ್ರಾ ಉಪಕಣಿವೆಯ ೨ ನೇ ಹಂತದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ಚಿಕ್ಕಮಗಳೂರು ತಾಲ್ಲೂಕಿನ ೬೧ ಕೆರೆಗಳು ತುಂಬಲಿವೆ ಎಂದರು.
ರಣಘಟ್ಟ ಯೋಜನೆಯಲ್ಲಿ ೫.೭೦ ಕಿ.ಮೀ.ಸುರಂಗ ನಿರ್ಮಾಣ ಆಗಬೇಕಿದೆ. ಈಗಾಗಲೇ ೨.೭೦ ಕಿ.ಮೀ. ಸುರಂಗ ಮಾರ್ಗ ಕಾಮಗಾರಿ ಮುಗಿದಿದೆ. ಇನ್ನೂ ೩ ಕಿ.ಮೀ. ಕಾಮಗಾರಿ ಆಗಬೇಕಿದೆ. ಈಗಾಗಲೇ ಅಧಿಕಾರಿಗಳು, ಸಚಿವರು ಎರಡು ಬಾರಿ ಕಾಮಗಾರಿ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನೀರಿಲ್ಲದೆ ನಮಗೆ ಬದುಕಿಲ್ಲ. ಅದಕ್ಕಾಗಿ ಗಂಗೆಗೆ ಕೃತಜ್ಞತೆ ಅರ್ಪಿಸಲು ಬಾಗಿನ ಬಿಡಲಾಗಿದೆ. ಗಂಗಾ ಮಾತೆ ಸದಾ ಕಾಲ ಹರಸಲಿ, ಪ್ರತೀ ವರ್ಷ ಕೆರೆ ಭರ್ತಿಯಾಗಿ ಕೋಡಿ ಬೀಳುವಂತಾಗಲಿ ಎಂದರು.
೧೨೮೧ ಕೋಟಿ ರೂ. ವೆಚ್ಚದ ಭದ್ರಾ ಉಪ ಕಣಿವೆಯಿಂದ ಕೆರೆಗಳನ್ನು ತುಂಬಿಸುವ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ. ಎರಡನೇ ಹಂತದಲ್ಲಿ ಮಾಚಗೊಂಡನ ಹಳ್ಳಿ, ದೇವರ ಕಾರೇಹಳ್ಳಿ ತಿಪ್ಪಗೊಂಡನ ಹಳ್ಳಿ ಕೆರೆಗಳ ಕಾಮಗಾರಿ ನಡೆಯುತ್ತಿದೆ. ಮೂರನೇ ಹಂತದಲ್ಲಿ ಕಳಸಾಪುರ, ಬೆಳವಾಡಿ ಸೇರಿದಂತೆ ಲಕ್ಯಾ, ಸಖರಾಯಪಟ್ಟಣ ಹೋಬಳಿಯ ಎಲ್ಲಾ ಕೆರೆಗಳನ್ನು ಯುಂಬಿಸುವ ಯೋಜನೆಗೆ ಮಂಜೂರಾತಿ ಈಗಾಗಲೇ ದೊರೆತು ಕಾಮಗಾರಿ ಆರಂಭಗೊಂಡಿರುವುದರಿಂದ ಎಲ್ಲಾ ಕೆರೆಗಳು ತುಂಬುತ್ತವೆ ಎನ್ನುವ ವಿಶ್ವಾಸವಿದೆ ಎಂದರು.
ಎತ್ತಿನ ಹೊಳೆ ನಮಗೆ ಅಚಾನಕ್ಆಗಿ ಸಿಕ್ಕಿದ ಸೌಭಾಗ್ಯ. ಆ ಯೋಜನೆಯಲ್ಲಿ ನಮ್ಮ ಈ ಭಾಗದ ಕೆರೆಗಳು ಸೇರಿರಲಿಲ್ಲ. ಇದರ ಜೊತೆಗೆ ರಣಘಟ್ಟ ಯೋಜನೆ ಕಾಮಗಾರಿಯೂ ನಡೆಯುತ್ತಿದೆ. ಇದೆಲ್ಲವೂ ಆದರೆ ಶಾಶ್ವತವಾಗಿ ನೀರು ಬರುವಂತಾಗುತ್ತದೆ. ಅದಕ್ಕೆ ದೈವ ಕೃಪೆಯೂ ಬೇಕು. ಎತ್ತಿನ ಹೊಳೆ ಯೋಜನೆ ನಮಗೆ ಸೇರಿಲ್ಲವಾದರೂ ಅದನ್ನು ಶಾಶ್ವತವಾಗಿ ಸೇರ್ಪಡೆಗೊಳಿಸುವ ಕೆಲಸವನ್ನು ಶಾಸಕರ ಜೊತೆ ಸೇರಿ ಮಾಡುತ್ತೇವೆ ಎಂದು ತಿಳಿಸಿದರು.
ಬೆಳವಾಡಿ ಕೆರೆ ಏರಿ ಬಿರುಕು ಬಿಟ್ಟಿಲ್ಲ. ಮೂಲ ಏರಿಯನ್ನು ಮುಟ್ಟಿಲ್ಲ. ಅಗಲೀಕರಣ ಮಾಡುವಾಗ ಕೆಳಗಡೆ ಕಟ್ಟಲಾಗಿರುವ ರಿವಿಟ್ಮೆಂಟ್ಗೆ ತಾಂತ್ರಿಕ ಸಮಸ್ಯೆಯಿಂದ ಸೋರಿಕೆಯಾದ ನೀರು ಹೊರಕ್ಕೆ ಹೋಗಲು ದಾರಿಯಿಲ್ಲದೆ ಬಿರುಕು ಕಾಣಿಸಿಕೊಂಡಿದೆ. ತಾಂತ್ರಿಕ ವರದಿಯನ್ನೂ ಪಡೆಯಲಾಗಿದೆ. ಅದರಲ್ಲಿ ಮೂಲ ಏರಿಗೆ ಏನೂ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಈ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಲೇಶಪುರದಲ್ಲಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದ ನಂತರ ಬೆಳವಾಡಿ ಕೆರೆಗೆ ನೀರು ಬಂದಿರುವುದು ಸಂತೋಷದ ವಿಚಾರ. ಈ ಭಾಗದ ಅನೇಕ ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಮಳೆ ಬರಲ್ಲ ಅಂತಿದ್ದರು. ಇಂದು ಉತ್ತಮ ಮಳೆ ಆಗಿ ಎಲ್ಲಾ ಕೆರೆಗಳು ತುಂಬಿವೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ರೇಖಾ ಹುಲಿಯಪ್ಪಗೌಡ, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಮುಖಂಡರುಗಳಾದ ಬಸವರಾಜ್, ಶುಭಾ ಸತ್ಯ, ಗ್ರಾ.ಪಂ.ಅಧ್ಯಕ್ಷೆ ಕಾವೇರಮ್ಮ, ಮಾಜಿ ಅಧ್ಯಕ್ಷೆ ಭಾಗ್ಯ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.
Bagai offering to Belawadi lake