ಚಿಕ್ಕಮಗಳೂರು: ಪ್ರಧಾನ ಮಂತ್ರಿ ಜನ್ಜಾತೀಯ ಉನ್ನತ್ ಗ್ರಾಮ ಅಭಿಯಾನ ಯೋಜನೆಗೆ ಜಿಲ್ಲೆಯ ೩ ಗ್ರಾಮಗಳು ಆಯ್ಕೆಯಾಗಿವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೃಂಗೇರಿ ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿಯ ಮಲ್ನಾಡು ಗ್ರಾಮ, ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಗ್ರಾಮ ಪಂಚಾಯಿತಿಯ ಮೇಗೂರು ಗ್ರಾಮ ಹಾಗೂ ಅಜ್ಜಂಪುರ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ಭೂತನಹಳ್ಳಿ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ ಎಂದು ಹೇಳಿದರು.
ದೇಶದ ೬೩,೦೦೦ ಬುಡಕಟ್ಟು ಗ್ರಾಮಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಐದು ಕೋಟಿ ಬುಡಕಟ್ಟು ಜನರಿಗೆ ಸೌಲತ್ತುಗಳನ್ನು ನೀಡುತ್ತದೆ. ಮುಖ್ಯವಾಗಿ ಬುಡಕಟ್ಟು ಕುಟುಂಬಗಳು ವಾಸಿಸುವ ಗ್ರಾಮಗಳು ಮತ್ತು ಮಹತ್ವಕಾಂಕ್ಷೆಯ ಜನರಿಗೆ ಸಾಮಾಜಿಕ, ಆರ್ಥಿಕ ಸೌಲಭ್ಯ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ ಯೋಜನೆ ಇದಾಗಿದೆ ಎಂದು ತಿಳಿಸಿದ ಅವರು. ಪ್ರತಿ ಪರಿಶಿಷ್ಟ ವರ್ಗದ ಕಾಲೋನಿಯ ಅಭಿವೃದ್ಧಿಯನ್ನು ರೂ. ೨೦.೩೯ ಲಕ್ಷಗಳಲ್ಲಿ ಮಾಡಲಾಗುವುದು. ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳು ಸೆಪ್ಟೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಈ ೩ ಗ್ರಾಮಗಳ ಸರ್ವೆ ಕಾರ್ಯ ಕೈಗೊಂಡು ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಭಾಗೀರಥಿ ಹಾಜರಿದ್ದರು.
3 villages of the district have been selected for Unnat Gram Abhiyan Yojana