ಚಿಕ್ಕಮಗಳೂರು: ತಾಲ್ಲೂಕು ಅಂಬಳೆ ಹೋಬಳಿ ಕೆ.ಆರ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಆರ್ ಪೇಟೆ ಗ್ರಾಮದ ಮುಖ್ಯ ರಸ್ತೆಯನ್ನು ದುರಸ್ಥಿಗೊಳಿಸಿ ಅಗಲೀಕರಣ ಮಾಡುವಂತೆ ಆಗ್ರಹಿಸಿ ಕೆ.ಆರ್ ಪೇಟೆ, ಬಿಗ್ಗನಹಳ್ಳಿ , ಕುಂದೂರು, ಮಾವಿನಕೆರೆ, ತಿರಗುಣ, ಕಂಬಿಹಳ್ಳಿ, ತಗಡೂರು, ಸಿದ್ದರಹಟ್ಟಿ, ಬೂದಿನಿಕೆ, ಕಂಚೇನಹಳ್ಳಿ, ಬಿಕ್ಕೆಮನೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇಂದು ರಸ್ತೆಗೆ ಕಲ್ಲುಗಳನ್ನು ಹಾಕಿ ಪ್ರತಿಭಟನೆ ನಡೆಸಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಕೆ.ಆರ್ ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ ರಾಘವೇಂದ್ರ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಕೆ.ಆರ್.ಪೇಟೆ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ, ಬ್ಯಾಂಕ್, ಅಂಗನವಾಡಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆ, ಆಸ್ಪತ್ರೆಗಳಿದ್ದು, ಮನೆಗಳು, ಅಂಗಡಿಗಳು ಇವೆ. ಆದ್ದರಿಂದ ರಸ್ತೆ ಕಿರಿದಾಗಿದ್ದು ಹೆಚ್ಚು ವಾಹನಗಳ ಓಡಾಟದಿಂದ ಗ್ರಾಮಸ್ಥರಿಗೆ ತೊಂದರೆ ಮತ್ತು ಅಪಘಾತಗಳು ಆಗುತ್ತಿವೆ ತಕ್ಷಣವೇ ಸ್ಥಳಿಯ ಶಾಸಕರು ರಸ್ತೆ ದುರಸ್ಥಿಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.
ಸರ್ಕಾರ ಕೆ.ಆರ್ ಪೇಟೆ ಗ್ರಾಮದ ಒಳಭಾಗದಲ್ಲಿ ಒಂದೂವರೆ ಕಿ.ಮೀ ರಸ್ತೆ ಗುಂಡಿ ಗೊಟರುಗಳಿಂದ ಕೂಡಿರುವ ಜೊತೆಗೆ ಕಿರಿದಾಗಿದ್ದು, ತಾವುಗಳು ಈ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅತೀ ಶೀಘ್ರದಲ್ಲಿ ನಮ್ಮ ಈ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಚೈತ್ರ, ಸದಸ್ಯರುಗಳಾದ ಟಿ.ಬಿ ಶಿವಪ್ರಸಾದ್, ಮೈತ್ರಿ ಎಂ.ಎಸ್, ಮಮತ, ಗ್ರಾಮಸ್ಥರುಗಳಾದ ಮಹೇಂದ್ರ, ದೊಡ್ಡೇಗೌಡ, ಪುಟ್ಟೇಗೌಡ, ಗೋಪಾಲ್, ರವೀಂದ್ರ, ಸಂದೀಪ್, ಜಯಪ್ಪಗೌಡ, ಬಿ.ವಿ ಪರಮೇಶ್, ಶಿವರಾಜ್, ನಾಗೇಶ್, ಗಿರೀಶ್ ಭಾಗವಹಿಸಿದ್ದರು.
KR Pete villagers protest demanding road widening