ಚಿಕ್ಕಮಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ೪೪ನೇ ರಾಜ್ಯಮಟ್ಟದ ಕಬ್ಸ್ ಮತ್ತು ಬುಲ್ ಬುಲ್ ಉತ್ಸವವನ್ನು ಅಕ್ಟೋಬರ್ ೫ ರಿಂದ ೯ ರವರೆಗೆ ಐದು ದಿನಗಳ ಕಾಲ ನಗರದ ಆದಿಚುಂಚನಗಿರಿ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ೬ ರಿಂದ ೧೦ ವರ್ಷ ವಯೋಮಾನದ ಸುಮಾರು ೧೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ೩೦೦ ಕ್ಕೂ ಹೆಚ್ಚು ಸ್ಕೌಟ್ನ ಶಿಕ್ಷಕರುಗಳು ಸೇರಿ ಒಟ್ಟು ೨೦೦೦ ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಎಲ್ಲಾ ಮಕ್ಕಳಿಗೆ ಆರೋಗ್ಯಕರ ಮತ್ತು ಶುಚಿ-ರುಚಿಯಾದ ಉಪಹಾರದೊಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
೧೯೨೪ ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಯುವರಾಜರಾದ ಜಯಚಾಮರಾಜೇಂದ್ರ ಒಡೆಯರವರು ಚೀಫ್ ಕಬ್ ಆಗಿ ನೊಂದಣಿಯಾದ ಜ್ಞಾಪಕಾರ್ಥ ಈ ಉತ್ಸವವನ್ನು ಚಿಕ್ಕಮಗಳೂರಿನಲ್ಲಿ ಏರ್ಪಡಿಸಲಾಗಿದ್ದು, ೧೯೨೦ ರಲ್ಲಿ ಮೊದಲನೇ ರಾಜ್ಯ ಜಾಂಬೂರಿ ನಡೆಸಿದ ಹೆಗ್ಗಳಿಕೆ ಇದೆ, ಈ ನಿಟ್ಟಿನಲ್ಲಿ ನಮ್ಮ ಮೊದಲ ಜಾಂಬೂರಿಯ ಶತಮಾನೋತ್ಸವವೆಂದು ಪರಿಗಣಿಸಿ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಮೇಳದಲ್ಲಿ ಸಾಹಸಮಯ ಚಟುವಟಿಕೆಗಳು, ಹೊರ ಸಂಚಾರ, ಶೈಕ್ಷಣೀಯ ಸ್ಥಳಗಳ ಸಂದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಜಿಲ್ಲೆಗಳ ವಿಶಿಷ್ಟ ಜಾನಪದ ಕಲೆಗಳು, ಕರಕುಶಲ ವಸ್ತುಗಳ ತಯಾರಿಕೆ, ಶಿಬಿರಾಗ್ನಿ, ಪ್ರಕೃತಿ ಅಧ್ಯಯನ ಮುಂತಾದ ಹತ್ತುಹಲವು ಕಾರ್ಯಕ್ರಮಗಳನ್ನು ನಡೆಸಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿವೆ ಎಂದರು.
ಉತ್ಸವದ ಅಂಗವಾಗಿ ದಿಕ್ಸೂಚಿ ಎಂಬ ಆಕರ್ಷಕ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದ್ದು, ಈ ಸ್ಮರಣಿಕೆಯಲ್ಲಿ ಗಣ್ಯರ ಸಂದೇಶಗಳು, ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸಂಬಂಧಿಸಿದ ಲೇಖನಗಳು, ಪ್ರಾಯೋಜಕ ಸಂಸ್ಥೆಗಳ ಜಾಹಿರಾತುಗಳನ್ನೊಳಗೊಂಡಂತೆ ಎಲ್ಲಾ ವಿಷಯಗಳನ್ನು ಈ ಸ್ಮರಣ ಸಂಚಿಕೆಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಸಾರಿಗೆ ವ್ಯವಸ್ಥೆ, ಸೌಚಾಲಯ, ವಸತಿ ವ್ಯವಸ್ಥೆಯ ಜೊತೆಗೆ ಕೈಚೀಲ, ಸ್ಕಾರ್ಪ್, ಓಗಲ್, ಟೀ ಶರ್ಟ್, ಕ್ಯಾಪ್ ಮತ್ತಿತರ ವಸ್ತುಗಳನ್ನು ನೀಡಲಾಗುವುದು. ಎಲ್ಲಾ ಮಕ್ಕಳಿಗೆ ಚಟುವಟಿಕೆಗಳನ್ನು ದಾಖಲಿಸಲು ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಒಂದು ಕಿರು ಒತ್ತಿಗೆಯನ್ನು ನೀಡಲಾಗುವುದು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಎಂ.ಎನ್. ಷಡಾಕ್ಷರಿ ಮಾತನಾಡಿ, ಯಾವುದೇ ಜಾತಿ, ಧರ್ಮ, ಭಾಷೆ, ವರ್ಣ ಮತ್ತಿತರ ತಾರತಮ್ಯವಿಲ್ಲದೆ ವಿಶ್ವ ಭ್ರಾತೃತ್ವವನ್ನು ಸಾರುವ ಈ ಒಂದು ಆಂದೋಲನ ಸಾಮಾಜಿಕ ಪ್ರಜ್ಞೆ, ಪ್ರಜೆಗಳ ಕರ್ತವ್ಯ, ಸಮಸ್ಯೆಗಳನು ಎದುರಿಸುವುದು, ತಮ್ಮನ್ನು ತಾವು ಸಂಬಾಳಿಸಿಕೊಂಡು ಇತರರಿಗೆ ಸಹಾಯ ಮಾಡುವ ದೇಯೋದ್ದೇಶಗಳನ್ನು ಮಕ್ಕಳಲ್ಲಿ ಬಿತ್ತುತ್ತಾ ಬಂದಿದ್ದು, ರಾಷ್ಟ್ರದ ಬಗ್ಗೆ ಪುಟ್ಟ ಮಕ್ಕಳ ಕುರಿತು ಕಾಳಜಿ ಇರುವ ಲಕ್ಷಾಂತರ ವಯಸ್ಕರ ಸ್ವಯಂ ಸೇವಕರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರು.
ಅ.೫ ರಂದು ಈ ಉತ್ಸವವನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಅವರು ಉದ್ಘಾಟಿಸಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂದ್ಯಾ, ರಾಜ್ಯ ಕಚೇರಿಯ ಎಲ್ಲಾ ಅಧಿಕಾರಿ ವರ್ಗದವರು ವಿವಿಧ ಜಿಲ್ಲೆಯ ತರಬೇತಿದಾರರು, ಸ್ವಯಂ ಸೇವಕರು, ರೋವರ್ಸ್, ರೇಂಜರ್ಸ್ ಇವರುಗಳು ಸಹಕಾರದೊಂದಿಗೆ ಈ ಮೇಳವನ್ನು ನಮ್ಮ ಊರಿನ ಹಬ್ಬ ಎನ್ನುವ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖಂಡರುಗಳಾದ ಸಿದ್ದೇಗೌಡ, ನೀಲಕಂಠಾಚಾರ್, ಪಣೀರಾಜ್, ಡಿ.ಎಸ್ ಮಮತ, ಸಂಧ್ಯಾರಾಣಿ, ಸಂಗಮನಾಥ್, ಕಿರಣ್ ಕುಮಾರ್ ಮತ್ತಿತರರಿದ್ದರು.
State-level Souts-Guides 44th State-level Festival