ಚಿಕ್ಕಮಗಳೂರು: ಅಜ್ಜಂಪುರ-ಆಧುನಿಕ ಕಾಲದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸತ್ಯ ಧರ್ಮ ನ್ಯಾಯ ನೀತಿ ಪರಿಪಾಲಿಸಿ ಬಾಳಿದರೆ ಬದುಕು ಉಜ್ವಲಗೊಳ್ಳುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದ ಮೇಲೆ ನಿರ್ಮಿಸಿದ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ದಾಸೋಹ ಮಂದಿರ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಾಜದಲ್ಲಿ ಸ್ಥಾನ ಮಾನಗಳು ಮತ್ತು ಆಸ್ತಿ ಅಂತಸ್ತುಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ಎಂದೆಂದಿಗೂ ಬದಲಾಗದಂತಿರಬೇಕು. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮದ ಸಂಪತ್ತು ಅಪಾರ ಅಮೂಲ್ಯ. ಜಾತಿಗಿಂತ ಧರ್ಮ ತತ್ವಕ್ಕಿಂತ ಆಚರಣೆ ಮುಖ್ಯವೆಂದ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸಿದೆ.
ಲಿಂ.ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಮಾನವ ಕಲ್ಯಾಣಕ್ಕಾಗಿ ಕಠಿಣ ತಪಸ್ಸು ಮಾಡಿ ಭಕ್ತರ ಬಾಳಿಗೆ ಬೆಳಕು ತೋರಿದರು. ಅಂಥ ಮಹಿಮಾನ್ವಿತರು ನೆಲೆ ನಿಂತ ತಾಣದಲ್ಲಿ ಬರುವ ಭಕ್ತರಿಗೆ ಪೂಜೆ, ವಸ್ತಿ ಮತ್ತು ದಾಸೋಹ ಏರ್ಪಡಿಸಿ ಅನುಕೂಲ ಕಲ್ಪಿಸುವುದು ಟ್ರಸ್ಟಿನ ಮೂಲ ಗುರಿಯಾಗಿದೆ. ಟ್ರಸ್ಟಿನ ಮತ್ತು ಮಹಿಳಾ ಸದಸ್ಯರ ಪರಿಶ್ರಮದಿಂದ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ದಾಸೋಹ ಮಂದಿರ ನಿರ್ಮಾಣಗೊಂಡು ಉದ್ಘಾಟನೆಯಾಗಿರುವುದನ್ನು ಕಂಡು ಅತ್ಯಂತ ಸಂತೋಷವಾಗಿದೆ ಎಂದರು.
ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ನಾಡಿನ ಆಚಾರ್ಯರ ಮಹಾತ್ಮರ ಕೊಡುಗೆ ಅಪಾರ. ಲಿಂ.ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ತಪಗೈದ ಈ ಕ್ಷೇತ್ರ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿಯಾಗುತ್ತಿರುವುದು ಸಂತೋಷದ ಸಂಗತಿ.
ಸಂಸ್ಕೃತಿಯ ಮೇಲೆ ಬಹಳಷ್ಟು ದುಷ್ಪರಿಣಾಮ ಉಂಟಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದರು. ತರೀಕೆರೆ ಕ್ಷೇತ್ರದ ಶಾಸಕ ಜಿ.ಹೆಚ್.ಶ್ರೀನಿವಾಸ್ ಮಾತನಾಡಿ ಪುಣ್ಯ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ ತಪಸ್ಸಿನಿಂದ ಈ ಕ್ಷೇತ್ರ ಅತ್ಯಂತ ಪವಿತ್ರವಾಗಿದೆ ಎಂದರು.
ನೇತೃತ್ವ ವಹಿಸಿದ ಎಡೆಯೂರು ರೇಣುಕ ಶಿವಾಚಾರ್ಯರು ಹಾಗೂ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಶಿವಪಥವನ್ನು ಅರಿಯಲು ಗುರುಪಥವೇ ಮೊದಲೆಂದು ಬಣ್ಣಿಸಿದರು.
ಈ ಪವಿತ್ರ ಸಮಾರಂಭದಲ್ಲಿ ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶ್ರೀಗಳು, ಚಿಕ್ಕಮಗಳೂರು ಚಂದ್ರಶೇಖರ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ನಂದೀಪುರ ನಂದೀಶ್ವರ ಶ್ರೀಗಳು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು, ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು, ಆಂಧ್ರದ ಪಾಲ್ತೂರು ಚನ್ನವೀರ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀಗಳು, ಕಲಾದಗಿ ಗಂಗಾಧರ ಶ್ರೀಗಳು ಉಪಸ್ಥಿತರಿದ್ದರು.
ಕೆ.ಆರ್.ಆನಂದಪ್ಪ, ಎಂ.ಕೃಷ್ಣಮೂರ್ತಿ, ಚಿಕ್ಕಾನವಂಗಲದ ವಿರುಪಾಕ್ಷಪ್ಪ, ಶಿವಮೊಗ್ಗದ ಉಮೇಶಾರಾಧ್ಯರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಟ್ಟಡ ನಿರ್ಮಾಣಕ್ಕೆ ವಿಶೇಷವಾಗಿ ಶ್ರಮಿಸಿದ ಬಿ.ಎಸ್.ಭಾಗ್ಯ, ಕು.ಬಿ.ವಿ.ಪ್ರತಿಭಾ ಹಾಗೂ ಎಂ.ಸಿ.ಶಾಂತ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷವಾಗಿ ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಕಟ್ಟಡ ನಿರ್ಮಾಣ ಮಾಡಿ ಅನ್ನ ದಾಸೋಹ ಸೇವೆಯನ್ನು ನಿರ್ವಹಿಸಿದ ಬೀರೂರಿನ ನವೀನ ಇವರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಟ್ರಸ್ಟಿನ ಕಾರ್ಯದರ್ಶಿ ಹೆಚ್.ಪಿ.ಸುರೇಶ ಹಾಗೂ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕುಮಾರಿ ಬಿ.ವಿ.ಪ್ರತಿಭಾ ಸ್ವಾಗತಿಸಿದರು. ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು.
ಬೆಳಿಗ್ಗೆ ಲಿಂ.ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳವರ ಮಂಗಲ ಮೂರ್ತಿಗೆ ವಿಶೇಷ ಪೂಜೆ ಹಾಗೂ ದಾಸೋಹ ಮಂದಿರದಲ್ಲಿ ಪೂಜಾ ಕಾರ್ಯಗಳು ಜರುಗಿದವು.
Inauguration of Sri Jagadguru Marulasiddheshwar Dasoha Mandir built on Bukkambudhi Hill