ಚಿಕ್ಕಮಗಳೂರು: ಈ ಬಾರಿಯ ೨೧ನೇ ವರ್ಷದ ದತ್ತಮಾಲಾ ಅಭಿಯಾನ ನ.೪ ರಿಂದ ನ.೧೦ ರವರೆಗೆ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.೪ರಂದು ನಗರದ ಶಂಕರಮಠದಲ್ಲಿ ದತ್ತಮಾಲಾಧಾರಣೆ ಕಾರ್ಯಕ್ರಮ ನಡೆಯಲಿದೆ. ಅಂದು ರಾಜ್ಯಾದ್ಯಂತ ದತ್ತಭಕ್ತರು ಮಾಲಾಧಾರಣೆ ಮಾಡಲಿದ್ದಾರೆ. ನ.೭ರಂದು ಶಂಕರಮಠದಲ್ಲಿ ಸಂಜೆ ೭ ಗಂಟೆಗೆ ದತ್ತ ದಿಪೋತ್ಸವ ಕಾರ್ಯಕ್ರಮ ನಡೆಯಲಿದೆ. ಜತೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಅಂದು ದತ್ತ ದಿಪೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನ.೯ ರಂದು ಚಿಕ್ಕಮಗಳೂರು ನಗರದಲ್ಲಿ ಪಡಿಸಂಗ್ರಹ ಹಾಗೂ ನ.೧೦ ರಂದು ನಗರದ ಶಂಕರಮಠದ ಮುಂಭಾಗದಲ್ಲಿ ಧರ್ಮಸಭೆ ನಡೆಯಲಿದೆ. ನಂತರ ಶಂಕರಮಠದಿಂದ ಆಜಾದ್ಪಾರ್ಕ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ರಾಜ್ಯಾದ್ಯಂತ ಸಾವಿರಾರು ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಅದೇ ದಿನ ಶ್ರೀರಾಮ ಸೇನೆ ಕಾರ್ಯಕರ್ತರು ಸೇರಿದಂತೆ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದುಕೊಳ್ಳಲಿದ್ದಾರೆ. ನಂತರ ಹೋಮ ಹವನಗಳು ಜರುಗಲಿವೆ ಎಂದು ತಿಳಿಸಿದರು.
ದತ್ತಮಾಲಾ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಹೈದರ ಬಾದ್ನಲ್ಲಿ ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ದ ಮಾಧವಿ ಲತಾ ಹಾಗೂ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಸಾಧುಸಂತರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಅ.೨೦ ರಂದು ರಾಜ್ಯಾದ್ಯಂತ ದತ್ತಪೀಠಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಯೋಚನೆ ಮಾಡಲಾಗಿದೆ. ದತ್ತಪೀಠ ವಿಭಿನ್ನವಾದ ಹೋರಾಟ ಮಾಡಬೇಕೆನ್ನುವುದು ಸಂಘಟನೆಯ ಆಶಯವಾಗಿದ್ದು, ಅಂದು ಇಡೀ ತಂಡ ರಾಜ್ಯಾದ್ಯಂತ ಈ ವಿಚಾರವನ್ನು ಸಮಾಜಕ್ಕೆ ತಿಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದತ್ತಪೀಠ ಸಂಪೂರ್ಣವಾಗಿ ಹಿಂದೂಪೀಠವಾಗಬೇಕು. ಅನ್ಯಚಟುವಟಿಕೆಗಳಿಗೆ ಅವಕಾಶ ನೀಡಬಾರದು, ಅಲ್ಲಿರುವ ಗೋರಿಗಳನ್ನು ನಾಗೇನಹಳ್ಳಿ ದರ್ಗಾಕ್ಕೆ ಸ್ಥಳಾಂತರ ಮಾಡಬೇಕು. ವ್ಯವಸ್ಥಾಪನಾ ಮಂಡಳಿ ಆಗಬೇಕು. ಪ್ರಸಾದ ವಿತರಣೆಯಾಗಬೇಕು. ದತ್ತಭಕ್ತರಿಗೆ ಯಾವುದೇ ಅಡೆತಡೆ ಇಲ್ಲದೆ ಪೂಜೆ ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ಹೋರಾಟದ ಫಲವಾಗಿ ಹಂತ ಹಂತವಾಗಿ ಯಶಸ್ಸು ಸಿಗುತ್ತಾ ಬಂದಿದ್ದು, ಅರ್ಚಕರ ನೇಮಕ ಸಂಬಂಧ ಛಲ, ಹಠ, ಧ್ವನಿ ಇತ್ತು. ಅರ್ಚಕರ ನೇಮಕವಾಗಿರುವುದು ಸಂತೋಷ ತಂದಿದೆ. ಹೋರಾಟಕ್ಕೆ ಚೈತನ್ಯ ಸಿಕ್ಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಮಾಲಿಂಗಣ್ಣ ಗುಂಜಿಗಾನಿ, ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಪೆಡಿಯಾಳ್, ರಾಜು ಖಾನಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರ್ನಾಥ್, ರಾಜ್ಯ ಕಾರ್ಯದರ್ಶಿ ಪರಶುರಾಮ್, ಜಿಲ್ಲಾಧ್ಯಕ್ಷ ಅರ್ಜುನ್ ಶೃಂಗೇರಿ, ರಾಜ್ಯ ಸಂಚಾಲಕ ಸುಂದರೇಶ್ ನರ್ಗಲ್ ಸೇರಿದಂತೆ ಅನೇಕರು ಇದ್ದರು.
Dattamala Abhiyan by Sri Rama Sena