ಚಿಕ್ಕಮಗಳೂರು: ಅನುಸೂಚಿತ ಜಾತಿ / ಅನುಸೂಚಿತ ಪಂಗಡಗಳಿಗೆ ಸೇರಿದ ಜನರು ವಾಸಿಸುವ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಉಸ್ತುವಾರಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ವಿವಿಧೆಡೆ ಪರಿಶಿಷ್ಟ ಜಾತಿ/ಪಂಗಡಗಳ ಜನರಿಗೆ ವಸತಿ, ನಿವೇಶನ ಹಾಗೂ ಸ್ಮಶಾನ ಜಾಗಗಳು ಒತ್ತುವರಿಯಾಗಿದೆ ಎಂದರು.
ಬಂದಿರುವ ದೂರುಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದ ಜಿಲ್ಲಾಧಿಕಾರಿಗಳು ಹಲವಡೆ ಅರಣ್ಯ, ಕಂದಾಯ ಭೂಮಿಗಳಲ್ಲಿರುವ ತಾಂತ್ರಿಕ ತೊಂದರೆಯನ್ನು ಬಗೆಹರಿಸಲು ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಗಣಿ ಗುತ್ತಿಗೆಗಳನ್ನು ಹರಾಜು ಮೂಲಕ ಮಂಜೂರಾತಿಗಾಗಿ ನಿಯತ-೩ಈ ರಂತೆ ಈ ಸಮುದಾಯಕ್ಕೆ ಸೇರಿದ ವ್ಯಕ್ತಿ ಅಥವಾ ನೋಂದಾಯಿತ ಸಂಘ, ವಂಶ ಪಾರಂಪರಿಕವಾಗಿ ಕಲ್ಲು ಗಣಿಗಾರಿಕೆ ನಿರ್ವಹಿಸುತ್ತಿರುವ ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಂದಾಯ ಇಲಾಖೆಗೆ ಸೇರಿದ ವಿವಿಧ ಸಮಸ್ಯೆಗಳನ್ನು ಇನ್ನೂ ೨ ತಿಂಗಳ ಒಳಗಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಗುರಿ ನಿಗಧಿಪಡಿಸಿದೆ ಅಷ್ಟರಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳು ಸಲ್ಲಿಸಿರುವ ನಿವೇಶನಗಳ ಹಕ್ಕು ಪತ್ರ ನೀಡಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ತಹಶೀಲ್ದಾರ್ಗಳಿಗೆ ಸೂಚಿಸಲಾಗಿದ್ದು, ಕೆಲವೆಡೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸುವಂತೆ ಸಂಬಂಧ ಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿದರು.
ಜಿಲ್ಲೆಯ ಕೆಲವು ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಮಿತಿ ಸದಸ್ಯರುಗಳು ಸಭೆಯ ಗಮನಕ್ಕೆ ತಂದರು.
ವಸತಿ ಶಾಲೆಗಳ ಮೂಲಭೂತ ಸಮಸ್ಯೆಗಳು ಹಾಗೂ ವಿದ್ಯಾರ್ಥಿಗಳಿಗೆ ಇರುವ ಕೆಲ ಅನಾನುಕೂಲಗಳ ಬಗ್ಗೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಹಿಮ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮೂರ್ತಿ, ತಹಸೀಲ್ದಾರ್ ಡಾ. ಸುಮಂತ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್ ಸೇರಿದಂತೆ ಎಲ್ಲ ತಾಲ್ಲೂಕು ತಹಸೀಲ್ದಾರ್ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರಾದ ರಮೇಶ್, ಮಹೇಶ್, ಮರುಳಪ್ಪ, ಶಂಕರ್, ಅಣ್ಣೇಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
Quarterly meeting of Scheduled Castes/Scheduled Tribes (Control of Atrocities) District Stewardship Committee organized by Social Welfare Department at Collectorate Office Hall.