ಚಿಕ್ಕಮಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಎಲ್ಲಾ ವೃಂದ ಸಂಘಗಳು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಇವರ ಸಹಯೋಗದಲ್ಲಿ ಆರ್ಡಿಪಿಆರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಿರತರ ಬಳಿ ತೆರಳಿದ ಶಾಸಕ ಹೆಚ್.ಡಿ ತಮ್ಮಯ್ಯ ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಚೇರಿ ಎದುರು ತಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವದ್ಧಿ ಸಂಘದ ಆಶ್ರಯದಲ್ಲಿ ನಡೆಸುತ್ತಿರುವ ಮುಷ್ಕರ ನಿರತರ ಬಳಿ ತೆರಳಿ ಬೇಡಿಕೆಯ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಪಂಚ ನೌಕರರು ಎದುರಿಸುತ್ತಿರುವ ನ್ಯಾಯಯುತವಾದ ಬೇಡಿಕೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಾಗದಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಒತ್ತಾಯ ಮಾಡಿ ಕೆಲವು ಬೇಡಿಕೆಗಳನ್ನು ಈಡೇರಿಸಲು ಮನವಿಗೆ ಪೂರಕವಾಗಿ ಸ್ಪಂದಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಷ್ಕರ ನಿರತರಿಗೆ ಭರವಸೆ ನೀಡಿದರು.
ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಪಿಡಿಓ, ಕಾರ್ಯದರ್ಶಿ, ಪಂಚ ನೌಕರರು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಚಳುವಳಿ ಚಿಕ್ಕಮಗಳೂರಿನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ ಎಂದು ಹೇಳಿದರು.
ಪಂಚ ನೌಕರರು, ಕಾರ್ಯದರ್ಶಿ, ಪಿಡಿಓ ಸಂಬಂಧಿಸಿದ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿ, ಚರ್ಚಿಸಿ ಅವರ ಮೂಲಭೂತ ಬೇಡಿಕೆಗಳ ಬಗ್ಗೆ ತಮಗೆ ಅರಿವಿದ್ದು, ಸಂಬಂಧಪಟ್ಟ ಸಚಿವರಿಗೆ ದೂರವಾಣಿ ಮೂಲಕ ಸಂಪರ್ಕಿಸಿರುವುದಾಗಿ ತಿಳಿಸಿದರು.
ದೂರವಾಣಿಗೆ ಸಚಿವರ ಆಪ್ತ ಕಾರ್ಯದರ್ಶಿ ಉತ್ತರಿಸಿ ತಮ್ಮ ಈ ಮನವಿಯನ್ನು ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರೆಂದು ಪ್ರತಿಭಟನಾಕಾರರಿಗೆ ಹೇಳಿದ ಶಾಸಕರು ಇಂದು ಮತ್ತೊಮ್ಮೆ ನಿಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿ ಅದರ ಸ್ವೀಕೃತಿಯನ್ನು ಸಂಜೆಯ ವೇಳೆಗೆ ಸಂಘದ ಪದಾಧಿಕಾರಿಗಳಿಗೆ ನೀಡುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ಸುಮಾರು ೩೪ ಗ್ರಾಮ ಪಂಚಾಯಿತಿಗಳಿವೆ. ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಪಿಡಿಓಗಳಿದ್ದು, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ನನ್ನ ವೈಯಕ್ತಿಕ ವಿರೋಧವಿದೆ. ನಾಲ್ಕು ಜನ ಕೆಲಸ ಮಾಡದವರು ಇರಬಹುದು ಅವರಿಗೋಸ್ಕರ ೩೦ ಜನ ಪಿಡಿಓಗಳಿಗೆ ವರ್ಗಾವಣೆ ಶಿಕ್ಷೆ ನೀಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಿಡಿಓಗಳ ವರ್ಗಾವಣೆಗೆ ನೀತಿ ರೂಪಿಸಿದರೆ ಅದನ್ನು ವಾಪಾಸ್ ಪಡೆಯಲು ಒತ್ತಡ ಹಾಕುವುದಾಗಿ ಭರವಸೆ ನೀಡಿದ ಶಾಸಕರು, ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವ ಧನ ಹೆಚ್ಚಳ ಮಾಡುವ ಕುರಿತು ಸರ್ಕಾರದ ಮೇಲೆ ಒತ್ತಡ ತರುವುದರ ಜೊತೆಗೆ ಸ್ಥಳೀಯ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿಮಾಡಲು ಅಧಿಕಾರ ನೀಡಬೇಕೆಂದು ಸಲಹೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಶೇ.೭೦ ರಷ್ಟು ಸೇವೆಗಳನ್ನು ಜನರಿಗೆ ಒದಗಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವಂತೆ ಒತ್ತಾಯಿಸಿದರು.
೭ ವರ್ಷ ಪೂರ್ಣಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು, ಜಿಲ್ಲೆಯಲ್ಲಿ ಸ್ವಇಚ್ಚೆ ಇಲ್ಲದೆ ಸಾರ್ವಜನಿಕ ಹಿತಾಸಕ್ತಿ, ಹಿತದೃಷ್ಟಿ ತೋರದೆ ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆ ತರುವ ಮುನ್ನ ಸಂಘದ ಸಲಹೆಯನ್ನು ಪಡೆಯುವುದು ಅಗತ್ಯ ಎಂದರು.
ಪಿಡಿಓಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮವಹಿಸಬೇಕು. ಎಂಜಿಎನ್ಆರ್ಇಜಿಎ ಯೋಜನೆಯ ಅನುಷ್ಠಾನಗೊಳಿಸುವ ಬಗ್ಗೆ ಗುರಿ ನಿಗಧಿಯನ್ನು ಕೈಬಿಡಬೇಕು. ಅವಶ್ಯಕತೆ ಇಲ್ಲದ ಕಡೆ ಗ್ರಾ.ಪಂ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರೆಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕುಂದುಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸಿ, ತಜ್ಞರ ಸಮಿತಿ ನೇಮಿಸಬೇಕು, ಏಕರೂಪ ಆಡಿಟ್ ಪದ್ದತಿ ಜಾರಿಗೊಳಿಸಿ, ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರವುದರ ಜೊತೆಗೆ ಎಲ್ಲಾ ತಂತ್ರಾಂಶಗಳಿಗೆ ಏಕರೂಪ ಸಹಾಯವಾಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ಅವರಿಗೆ ಸಲ್ಲಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಆಡಳಿತ ಪಕ್ಷದ ಶಾಸಕ ಹೆಚ್.ಡಿ ತಮ್ಮಯ್ಯ ಅವರು ಮುಷ್ಕರ ನಡೆಸುತ್ತಿರುವವ ಬಳಿಗೆ ಬಂದು ತಮ್ಮ ಬೇಡಿಕೆಗಳ ಮನವಿ ಪತ್ರ ಪಡೆದು ಸರ್ಕಾರದ ಗಮನಕ್ಕೆ ತಂದು ಈಡೇರಿಸುವುದಾಗಿ ಭರವಸೆ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆಂದರು.
ಈ ನಿಮ್ಮ ಸಮಸ್ಯೆಗಳ ಜೊತೆ ಸರ್ಕಾರಿ ನೌಕರರ ಸಂಘ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಮುಷ್ಕರ ತೀವ್ರಗೊಂಡರೆ ಇಡೀ ರಾಜ್ಯದ ಸರ್ಕಾರಿ ನೌಕರರು ನಿಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಪ್ರತಿಭಟನೆಯಲ್ಲಿ ಪಂಚಾಯತ್ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜುವಿಜಯನ್, ಉಪಾಧ್ಯಕ್ಷೆ ಶಾಂತಿ, ರಾಜ್ಯ ಪರಿಷತ್ ಸದಸ್ಯ ಸುನಿಲ್, ಸಂಘಟನಾ ಕಾರ್ಯದರ್ಶಿ ರಾಜ್ಕುಮಾರ್, ಪವಿತ್ರ, ಸಾಂಸ್ಕೃತಿಕ ಕಾರ್ಯದರ್ಶಿ ಸುರಯ್ಯಬಾನು, ಖಜಾಂಚಿ ಶೇಖರ್, ಕ್ರೀಡಾ ಕಾರ್ಯದರ್ಶಿ ನಾಗೇಶ್, ಆರ್.ಡಿ.ಪಿ.ಆರ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪದ್ಮರಾಜ್, ಪಿ.ಡಿ.ಓ ತಾಲ್ಲೂಕು ಸಂಘದ ಅಧ್ಯಕ್ಷರುಗಳಾದ ಎನ್.ಎಸ್.ಜಗನಾಥ್, ಶಿವಕುಮಾರ್, ಮನೀಕ್ಷ್, ಕೃಷ್ಣಪ್ಪ, ಆದಿನಾಥ್ಬಿಳಗಿ, ಪ್ರಸನ್ನ, ಶಿವಮೂರ್ತಿ, ಪ್ರತಿನಿಧಿಗಳಾದ ಸಹದೇವ್, ರುದ್ರೇಶ್, ಎಸ್.ಡಿ.ಎ.ಎ ಜಿಲ್ಲಾ ಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ.ಎಸ್, ಮಹೇಶ್ವರಪ್ಪ, ರಾಜಪ್ಪ ಉಪಸ್ಥಿತರಿದ್ದರು.
Sincere effort to fulfill the demand of Gram Panchayat Panchayat employees