ಚಿಕ್ಕಮಗಳೂರು: ಸರ್ಕಾರವು ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ತರೀಕೆರೆ ತಾಲ್ಲೂಕು ತರೀಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೯ರ ಸರಪಳಿ ೧೬೯,೮೮ ರಿಂದ ೧೭೨,೩೮ ಕಿ.ಮೀ. ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಯ ಹಾಗೂ ತರೀಕೆರೆ ಪುರಸಭಾ ಭವನದ ಬಿ.ಹೆಚ್. ರಸ್ತೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ರಾಜ್ಯದ ಜನತಗೆ ಸಮೃದ್ಧಿ ಜೀವನ ರೂಪಿಸಿ ಕೊಡಲು ಹಾಗೂ ನೀರ್ಭಿತಿಯಿಂದ ಸ್ವಾವಲಂಬಿ ಬದುಕು ನಿರ್ವಹಿಸಲು ರಸ್ತೆ, ಕುಡಿಯುವ ನೀರು, ವಿದ್ಯುತ್ ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹಾಗೂ ಮಹಿಳಾ ಸಬಲೀಕರಣದ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಠಾನಗೊಳಿಸಿ ಯಾವುದೇ ಅಡಚಣೆ ಇಲ್ಲದೆ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಲು ಕ್ರಮವಹಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳಾ ಸಬಲೀಕರಣದೊಂದಿಗೆ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳಲ್ಲೂ ಬದಲಾವಣೆಗಳನ್ನು ತಂದಿದೆ. ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಹಿಂದೇಟು ಹಾಕದೆ ರಾಜ್ಯವನ್ನು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯತ್ತ ಸಾಗಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳ ಅನುಷ್ಠಾನಕ್ಕೆ ಕ್ರಮವಹಿಸುತ್ತಿದೆ.
ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ರಸ್ತೆಗಳು ಹದಗೆಟ್ಟಿವೆ. ಇವುಗಳ ದುರಸ್ತಿ ಕಾರ್ಯಗಳಿಗೆ ಯಾವುದೇ ರಾಜಕೀಯ ಪಕ್ಷಪಾತವಿಲ್ಲದೇ ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಜನತೆಗೆ ಸಮೃದ್ಧಿ ಜೀವನ ನಿರ್ಮಿಸಿಕೊಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ್ ಮಾತನಾಡಿ ತರೀಕೆರೆ ಪಟ್ಟಣದ ಬಿ.ಹೆಚ್. ರಸ್ತೆಯ ಕಾಮಗಾರಿಯು ಬಹುದಿನದ ಕನಸಾಗಿದ್ದು, ಇಂದು ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿರುವುದು ಕ್ಷೇತ್ರದ ಜನತೆಯಲ್ಲಿ ಸಂತಸ ತಂದಿದೆ. ಈ ರಸ್ತೆಯು ಸುಮಾರು ೫೫ ಕೋಟಿ ರೂ.ಗಳ ಕಾಮಗಾರಿಯಾಗಿದೆ.
ಈ ರಸ್ತೆ ಅಭಿವೃದ್ಧಿಯಿಂದಾಗಿ ಸುಲಭ ಸರಕು ಸಾಗಾಣಿಕೆ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಹಾಗೂ ವರ್ತಕರ ವ್ಯಾಪಾರ ವಹಿವಾಟುಗಳು ವ್ಯವಸ್ಥಿತವಾಗಿ ನಡೆಯುವುದಲ್ಲದೆ. ಪಟ್ಟಣದ ಅಭಿವೃದ್ಧಿಯು ಶೀಘ್ರಗತಿಯಲ್ಲಿ ಸಾಗುತ್ತದೆ. ಸರ್ಕಾರದ ಹಲವು ಕಾರ್ಯಕ್ರಮಗಳು ಕ್ಷೇತ್ರದ ಜನತೆಯು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದ್ದು,
ಒಟ್ಟಾರೆ ರಾಜ್ಯದ ಅಭಿವೃದ್ಧಿಯನ್ನು ಗುರಿಯಾಗಿರಿಸಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದಲ್ಲಿ ಸುಮಾರು ೧೩೦ ಕೋಟಿ ರೂ. ಗಳಷ್ಟು ಹಣದಿಂದ ಫಲಾನುಭವಿಗಳು ಯೋಜನೆಯ ಫಲವನ್ನು ಪಡೆದಿದ್ದಾರೆ. ಗ್ಯಾರಂಟಿ ಯೋಜನೆಯು ಸರ್ಕಾರದ ಕನಸಿನ ಯೋಜನೆಯಾಗಿದ್ದು, ಈ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬೆಂಗಳೂರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಶಾಸಕ ಟಿ.ಡಿ. ರಾಜೇಗೌಡ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ, ಕ. ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ತರೀಕೆರೆ ಪುರಸಭೆ ಅಧ್ಯಕ್ಷ ವಸಂತ್ ಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ ವರ್ಮ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Tarikere Municipal Hall B.H. Foundation laying ceremony of road pavement development work