ಚಿಕ್ಕಮಗಳೂರು: ಪ್ರತಿಯೊಬ್ಬರು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಗಮನ ಹರಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ವಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ನರ್ಸಿಂಗ್ ಕಾಲೇಜು ವತಿಯಿಂದ ನಗರದ ಶ್ರೀ ರಾಮಕೃಷ್ಣ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ೨೦೨೪ರ ಅರಿವು ಕಾರ್ಯಕ್ರಮ ಹಾಗೂ ವಿಶ್ವ ದೃಷ್ಠಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮವನ್ನು ಒಳಗೊಂಡಿದೆ. ನಾವು ಹೇಗೆ ಯೋಜಿಸುತ್ತೇವೆ, ಭಾವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಇದು ಪರಿಣಾಮ ಬೀರುತ್ತದೆ. ನಾವು ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಇತರರೊಂದಿಗಿನ ಸಂಬಂಧವು ನಮ್ಮ ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದರು.
ವ್ಯಕ್ತಿಯ ಮಾನಸಿಕ ಅಸ್ವಸ್ಥತೆಯು ದೈಹಿಕ ಆರೋಗ್ಯಕ್ಕೂ ದುಷ್ಪರಿಣಾಮವನ್ನು ಬೀರುತ್ತದೆ. ಮೆದುಳಿನಲ್ಲಿ ಜೈವಿಕ ಅಂಶಗಳು ಅಥವಾ ರಾಸಾಯನಿಕ ಅಸಮತೋಲನ, ಮದ್ಯ ಅಥವಾ ಮಾದಕ ವಸ್ತುಗಳ ಸೇವನೆ ಒಂಟಿತನ ಅಥವಾ ಪ್ರತ್ಯೇಕತೆಯ ಭಾವನೆಗಳನ್ನು ಹೊಂದಿರುವುದು ಮಾನಸಿಕ ಒತ್ತಡಕ್ಕೆ ಕಾರಣಗಳಾಗಿದೆ. ಪ್ರಸ್ತುತ ಸಮಾಜದ ಯುವ ಜನತೆಯು ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ ತಮ್ಮ ದೃಷ್ಠಿ ದೋಷದೊಂದಿಗೆ ಮಾನಸಿಕವಾಗಿಯು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಾನಸಿಕವಾಗಿ ಅಸ್ವಸ್ಥರಾದ ವ್ಯಕ್ತಿಯು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಲ್ಲಿ ವಿಫಲರಾಗುತ್ತಾರೆ.
ಮಾನಸಿಕವಾಗಿ ಖಿನ್ನತೆಗೊಳಗಾಗುವ ವ್ಯಕ್ತಿಯ ಹಿತ ದೃಷ್ಠಿಯಿಂದ ಅನೇಕ ಕಾಯ್ದೆ ಕಾನೂನುಗಳು ಜಾರಿಯಾಗಿವೆ ಹಾಗೂ ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸರ್ಕಾರವು ೧೪೪೧೬ ಟೋಲ್ ಫ್ರೀ ಸಂಖ್ಯೆ ಬಿಡುಗಡೆ ಮಾಡಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಮೆಂಟಲ್ ಹೆಲ್ತ್ ರಿಫ್ರೇಶ್ ಬೋರ್ಡ್ ತೆರೆದು ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಸಮಾಲೋಚನೆ ನಡೆಸಿ ಅವರು ಗುಣಮುಖರಾಗಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇಹದ ಎಲ್ಲಾ ಅಂಗಾಂಗಗಳನ್ನು ಸುರಕ್ಷಿತವಾಗಿರಿಸಿಕೊಳ್ಳವುದು ಅವರ ಜವಾಬ್ದಾರಿಯಾಗಿರುತ್ತದೆ. ದೇಹದ ಒಂದು ಅಂಗಾಂಗ ವ್ಯತ್ಯಾಸವಾದರು ದೇಹದ ಅಸಮತೋಲನೆಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರು ಸೇರಿದಂತೆ ಯುವಜನತೆಯು ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ ಕಣ್ಣಿನ ದೃಷ್ಠಿದೋಷಗಳಿಗೆ ಕಾರಣವಾಗುತ್ತಿದೆ.
ಮೊಬೈಲ್ ಎಷ್ಟು ಪೂರಕವು ಅಷ್ಠೆ ಮಾರಕವಾಗಿದೆ ಅನವಶ್ಯಕವಾಗಿ ಮೊಬೈಲ್ ಬಳಕೆ ದೃಷ್ಠಿದೋಷ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಂಡು ತಮ್ಮ ಮರಣದ ನಂತರ ಅಂಗಾಂಗಗಳನ್ನು ಇತರರಿಗೆ ದಾನ ಮಾಡಲು ಮುಂದಾಗಿ ಎಂದರು.
ರಾಮಕೃಷ್ಣ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಹೆಚ್.ಎಸ್. ಉಮಾಮಹೇಶ್ವರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಟಿ.ಪಿ. ಬಾಲಕೃಷ್ಣ, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ವಿಜಯ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Awareness program for World Mental Health Day 2024