ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮು ಗಲಭೆ ಹುಟ್ಟು ಹಾಕಲು ಪ್ರಯತ್ನಿಸಿದವರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆಯುವ ಮೂಲಕ ದಸರಾ ಸಂದರ್ಭದಲ್ಲಿ ದುಷ್ಟರ ರಕ್ಷಣೆಗೆ ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಸರಾ, ವಿಜಯದಶಮಿ ಉದ್ದೇಶವೇ ದುಷ್ಟರಿಗೆ ಶಿಕ್ಷೆ ಕೊಡಬೇಕು ಎನ್ನುವುದು. ಸಜ್ಜನರ ರಕ್ಷಣೆ ಆಗಬೇಕುಎನ್ನುವುದು ಆದರೆ ಈ ಸರ್ಕಾರ ಮೊಕದ್ದಮೆ ಹಿಂದಕ್ಕೆ ಪಡೆದು ಸಜ್ಜನರ ರಕ್ಷಣೆ ಮಾಡಲಿಲ್ಲ. ದುರ್ಜನರ ರಕ್ಷಣೆಗೆ ಹೊರಟಿದೆ. ಇದು ಅಕ್ಷಮ್ಯ ಅಪರಾಧ, ಮಹಾ ತಪ್ಪು ಎಂದರು.
ಈ ನಿರ್ಣಯವನ್ನು ಮರು ಪರಿಶೀಲದೆ ಇದ್ದಲ್ಲಿ ದುಷ್ಟರ ರಕ್ಷಣೆಗೆ ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹುಬ್ಬಳ್ಳಿ ಚಲೋ ಕಾರ್ಯಕ್ರಮಕ್ಕೆ ಕರೆ ಕೊಡಬೇಕಾಗುತ್ತದೆ. ನಮ್ಮ ಕೋರ್ ಕಮಿಟಿ ಸದಸ್ಯರು ಹಾಗೂ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಸರ್ಕಾರದ ಕೆಟ್ಟ ನೀತಿ ವಿರುದ್ಧ ಜನಾಂಧೋಲನವನ್ನು ರೂಪಿಸಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ಕರ್ನಾಟಕ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಆಗುತ್ತಿದೆ. ಹಿಂದಿನ ಅವಧಿಯಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀರಿ ಎಸ್ಡಿಪಿಐ, ಪಿಎಫ್ಐಗೆ ಸೇರಿದ ೨೦೦೦ ಕ್ಕೂ ಹೆಚ್ಚು ಜನರ ಮೊಕದ್ದಮೆ ಹಿಂದಕ್ಕೆ ಪಡೆದ ಪರಿಣಾಮ ರಾಜು ಹತ್ಯೆ, ರುದ್ರೇಶ್ ಹತ್ಯೆ ಈ ರೀತಿ ಸರಣಿ ಹತ್ಯೆಗಳು ನಡೆದವು ಮತ್ತೆ ರಾಜ್ಯದಲ್ಲಿ ಇಂತಹ ಪರಂಪರೆಯನ್ನ ಪುನರ್ ಪ್ರಾರಂಭಿಸಬೇಕೆಂದು ದುಷ್ಟರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆದಿದ್ದೀರಿ ಇದನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ನಾಡ ಹಬ್ಬ ದಸರಾಗೆ ಅದರದ್ದೇ ಆದ ಗೌರವ ಇದೆ. ಅದಕ್ಕೆ ಚ್ಯುತಿ ಬರುವಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಎಲ್ಲಿ ರಾಜಕಾರಣ ಮಾತನಾಡಬೇಕು, ಎಲ್ಲಿ ಮಾನತಾಡಬಾರದು ಎನ್ನುವ ಪತಿಜ್ಞಾನವೇ ಇಲ್ಲದಂತೆ ಅವರ ವರ್ತನೆ ಇದೆ ಎಂದರು.
ದಸರಾ ಉದ್ಘಟನೆ ದಿನ ಚಾಮುಂಡಿ ಬೆಟ್ಟದಲ್ಲಿ ನಾಡ ಸಂಸ್ಕೃತಿ ಬಗ್ಗೆ ಮಾತನಾಡಲಿಲ್ಲ. ಪರಂಪರ ಬಗ್ಗೆ ಮಾತನಾಡಲಿಲ್ಲ. ಇತಿಹಾಸದ ಬಗ್ಗೆ ಮಾತನಾಡಲಿಲ್ಲ. ಅದರ ಬದಲಿಗೆ ಅಲ್ಲಿ ಮಾತನಾಡಿದ್ದೂ ಸಹ ರಾಜಕಾರಣವನ್ನೇ ಎಂದರು.
ನಾಡಹಬ್ಬ, ಅದರ ಹಿನ್ನೆಲೆ, ಚಾಮುಂಡೇಶ್ವರಿಯ ಗುಣಗಾನ, ಮೈಸೂರು ರಾಜರ ಕೊಡುಗೆ ಬಗ್ಗೆ, ಕನ್ನಡ ನಾಡು, ನುಡಿಯ ಬಗ್ಗೆ ಸ್ಮರಿಸಬೇಕಿತ್ತು. ಅದನ್ನು ಬಿಟ್ಟು ರಾಜಕಾರಣ ಮಾತನಾಡಿದರು ಎಂದು ಆರೊಪಿಸಿದರು.
ಇದಾದ ನಂತರ ಸರ್ಕಾರದ ದುಡ್ಡಿನಲ್ಲಿ ಒಂದು ಜಾಹಿರಾತು ಕೊಟ್ಟಿದ್ದಾರೆ. ಕಾಂಗ್ರೆಸ್ ದುಡ್ಡಿನಲ್ಲಿ ಕೊಟ್ಟಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಜನರ ತೆರಿಗೆ ಹಣದಲ್ಲಿ ಜಾಹಿರಾತು ಕೊಟ್ಟಿದ್ದಾರೆ. ಆದರೆ ಅದಕ್ಕೂ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ ಎಂದು ದೂರಿದರು.
ಯಾರು ಕೋಮುಗಲಭೆಗೆ ಕಾರಣರಾಗಿದ್ದರೋ ಅವರ ಮೊಕದ್ದಮೆಗಳನ್ನ ಮಂತ್ರಿಮಂಡಲದಲ್ಲಿ ಹಿಂದಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಲು ಬಂದವರು, ಆಂಜನೇಯ ಸ್ವಾಮಿ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದವರು, ಟ್ರಾಕ್ಟರ್ಗಳಲ್ಲಿ ಕಲ್ಲು ತುಂಬಿಕೊಂಡು ಬಂದು ದೊಂಬಿ ಎಬ್ಬಿಸಿದವರ ಮೇಲಿನ ಮೊಕದ್ದಮೆ ಹಿಂಪಡೆಯಲಾಗಿದೆ. ಇವರೆಲ್ಲ ಏನು ರೈತ ಹೋರಾಟಗಾರರೆ ಅಥವಾ ಕನ್ನಡ ಹೋರಾಟಗಾರರ ಎಂದು ಪ್ರಶ್ನಿಸಿದರು.
ಕೋಮುಗಲಭೆ ಹುಟ್ಟು ಹಾಕಬೇಕೆನ್ನುವ ಸಂಚು ರೂಪಿಸಿ ಕಲ್ಲು ತೂರಿದವರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆದು ಜಾಹಿರಾತು ನೀಡಲಾಗಿದೆ. ಅವರ ಜಾಹಿರಾತಿಗೂ ಅವರು ನಡೆದುಕೊಂಡಿರುವುದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
The Congress government of the state has come forward to protect the wicked on the occasion of Dussehra