ಚಿಕ್ಕಮಗಳೂರು: ನಾಡು, ನುಡಿ, ನೆಲ, ಜಲ ಸಂರಕ್ಷಣೆ ಜತೆಗೆ ರೈತಾಪಿ ವರ್ಗದ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನೂತನವಾಗಿ ಪ್ರವೀಣ್ಶೆಟ್ಟಿ ಬಣದ ಕರ್ನಾಟಕ ರಕ್ಷಣಾವೇದಿಕೆ ಸಂಘಟಿಸುತ್ತಿದ್ದು, ಇಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆ ಬಲವರ್ಧನೆ ಮಾಡುವ ಉದ್ದೇಶದಿಂದ ಇಡೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ಈಗಾಗಲೇ ವಿವಿಧ ಹೋಬಳಿ ಘಟಕಗಳನ್ನು ರಚಿಸಿದ್ದೇವೆ. ನಾಡಿನ ಭಾಷೆ, ನೆಲ-ಜಲದ ಜತೆಗೆ ರೈತರು ಇಂದು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ೭೫-೮೦ ವರ್ಷದಿಂದ ಸಾಗುವಳಿ ಮಾಡಿದ ಭೂಮಿಯನ್ನು ಅರಣ್ಯ ಇಲಾಖೆ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಹೈನುಗಾರಿಕೆ ಮಾಡಲು ಇದ್ದ ಗೋಮಾಳವನ್ನು ಡೀಮ್ಡ್ ಹೆಸರಲ್ಲಿ ಅರಣ್ಯ ಬೆಳೆಸಲಾಗಿದೆ. ಇದರಿಂದ ರೈತರು ಇಂದು ಹೈನುಗಾರಿಕೆಯಿಂದಲೇ ವಿಮುಖರಾಗಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಶೆಟ್ಟಿ ಬಣ ಹೋರಾಟ ಆರಂಭಿಸಲಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಸಮಾಜದಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲು ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿದ್ದು, ಉತ್ತಮ ಕೆಲಸ ಮಾಡುವ ಅವಕಾಶ ಇಲ್ಲಿ ದೊರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಸ್.ಡಿ.ಜೀವನ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಹರ್ಷ, ಗೌರವಾಧ್ಯಕ್ಷ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಕುಮಾರ, ಲಕ್ಯಾಹೋಬಳಿ ಅಧ್ಯಕ್ಷ ಮಾರುತಿ, ಪರಮೇಶ್ವರಪ್ಪ, ನಗರಾಧ್ಯಕ್ಷ ಧನುಷ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರು ಇದ್ದರು.
Praveen Shetty’s faction’s capture of the Karnataka Defense Platform today